ದೆಹಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸತತ ಮೂರನೇ ಅವಧಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ. ಶುಕ್ರವಾರ ನಡೆದ ಸಭೆಯಲ್ಲಿ, ಹೊಸದಾಗಿ ಆಯ್ಕೆಯಾದ ಸಂಸದರು ಸರ್ವಾನುಮತದಿಂದ ಮೋದಿಯನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದರು. ಇದೀಗ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಇಂದು (ಜೂನ್ 9 ರಂದು) ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಸಮಾರಂಭವನ್ನು ಟಿವಿ ಸುದ್ದಿ ವಾಹಿನಿಗಳು ಮತ್ತು X ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂನ್ 9 ರ ಭಾನುವಾರ ಸಂಜೆ 7:15 ರ ಸುಮಾರಿಗೆ ನಡೆಯಲಿದೆ. ಜೂನ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ತಮ್ಮ ಮತ್ತು ಕೇಂದ್ರ ಸಚಿವ ಸಂಪುಟದ ರಾಜೀನಾಮೆಯನ್ನು ಸಲ್ಲಿಸಿದರು.
ಭಾಗವಹಿಸುವ ಗಣ್ಯರು
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳದ ಪ್ರಧಾನಿ ಪುಷ್ಪಾ ಕಮಲ್ ದಹಲ್, ಮಾಲ್ಡೀವಿಯನ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಇತರರು ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮಿತ್ರ ಪಕ್ಷಗಳನ್ನು ಸಂಬಾಳಿಸಿಕೊಂಡು ಸಮತೋಲಿತ ಸಂಪುಟ ರಚನೆಗೆ ಮುಂದಾಗಿರುವ ಮೋದಿ, 4 ಪ್ರಮುಖ ಖಾತೆಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಮಿತ್ರ ಪಕ್ಷದ ನಾಯ್ಡುಗೆ 3, ನಿತೀಶ್
3 ಸಂಪುಟ ಖಾತೆ ಸಮನಾಗಿ ಹಂಚಿಕೆಯಾಗುವ ಸಾಧ್ಯತೆ ಇದೆ.ಮೊದಲ ಹಂತದಲ್ಲಿ 30 ಸಚಿವರು ಮೋದಿ ಅವರ ಸಂಪುಟ ಸೇರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಎನ್ಡಿಎ ಸರಕಾರದ ಬೆಂಬಲಕ್ಕೆ ನಿಂತಿರುವ ಪ್ರಮುಖ ಮಿತ್ರ ಪಕ್ಷಗಳಾದ ಚಂದ್ರಬಾಬು ನಾಯ್ಡು ಅವರ ಟಿಡಿಪಿ, ನಿತೀಶ್ ಕುಮಾರ್ ಅವರ ಜೆಡಿಯು ಸಂಪುಟದಲ್ಲಿ ಪ್ರಬಲ ಖಾತೆಗೆ ಹಕ್ಕು ಮಂಡಿಸಿವೆ. 16 ಸಂಸದರನ್ನು ಹೊಂದಿರುವ ಟಿಡಿಪಿ ನಾಲ್ಕು ಖಾತೆ ಜತೆಗೆ ಸ್ಪೀಕರ್ ಸ್ಥಾನ ಬಯಸಿದೆ. 12 ಸಂಸದರ ಬಲ ಹೊಂದಿರುವ ಜೆಡಿಯು ಮೂರು ಪ್ರಮುಖ ಖಾತೆಗೆ ಬೇಡಿಕೆ ಇಟ್ಟಿದೆ. ಜೆಡಿಎಸ್ 1, ಎಲ್ಜೆಪಿ 1, ಶಿವಸೇನೆ (ಶಿಂಧೆ ಬಣ) 1 ಇನ್ನಿತರೆ ಮಿತ್ರ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ನೀಡಲು ಚಿಂತನೆ ನಡೆದಿದೆ.









