ಇಸ್ರೋ ಸಾಧನೆಗೆ ಇನ್ನೊಂದು ಗರಿ- ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿದ ಆದಿತ್ಯ ಎಲ್ 1.

Coastal Bulletin
ಇಸ್ರೋ ಸಾಧನೆಗೆ ಇನ್ನೊಂದು ಗರಿ- ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿದ ಆದಿತ್ಯ ಎಲ್ 1.

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಮಹತ್ವಾಕಾಂಕ್ಷಿ ಆದಿತ್ಯ-ಎಲ್1 ಮಿಷನ್ ಇಂದು ತನ್ನ ಗಮ್ಯಸ್ಥಾನವಾಗಿರುವ ಎಲ್-1 ಪಾಯಿಂಟ್ ಅನ್ನು ಯಶಸ್ವಿಯಾಗಿ ತಲುಪಿದೆ. ಭಾರತ ಇನ್ನೊಂದು ಮೈಲಿಗಲ್ಲು ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಿ ಟ್ವಿಟ್ ಮಾಡಿದ್ದಾರೆ. 110 ದಿನಗಳಿಗೂ ಹೆಚ್ಚಿನ ಪ್ರಯಾಣದ ಅವಧಿಯಲ್ಲಿ ಆದಿತ್ಯ ಎಲ್1 15 ಲಕ್ಷ ದೂರ ಕ್ರಮಿಸಿ ನಿಖರವಾಗಿ ತನ್ನ ಕಕ್ಷೆ ತಲುಪಿದೆ.

ಈ ಎಲ್1 ಪಾಯಿಂಟ್ ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಅಂದಾಜು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಸೂಕ್ತ ಸ್ಥಳದಲ್ಲಿ ನಿಲ್ಲಿಸಿದೆ ಹಾಗೂ ಇಲ್ಲಿಂದ ಸೂರ್ಯನನ್ನು ಯಾವುದೇ ಅಡಚಣೆಯಿಲ್ಲದೆ ನೋಡಿ ಅಧ್ಯಯನ ನಡೆಸಬಹುದಾಗಿದೆ.

ಈ ಬಾಹ್ಯಾಕಾಶ ನೌಕೆ ಲ್ಯಾಗ್ರೇಂಜ್ ಪಾಯಿಂಟ್ ಅಥವಾ ಎಲ್‌1 ಪಾಯಿಂಟ್ ಸುತ್ತಲಿನ ಹೇಲೋ ಕಕ್ಷೆ ತಲುಪಿದೆ. ಇಲ್ಲಿಂದ ಅದು ಸೂರ್ಯನನ್ನು ನಿರಂತರವಾಗಿ ನೋಡಿ ಸೌರ ಚಟುವಟಿಕೆಗಳ ಅಧ್ಯಯನ ನಡೆಸಲಿದೆ.

ಇಂದು ಬೆಳಿಗ್ಗೆ

ಇಸ್ರೋ ಈ ಹೇಲೋ ಕಕ್ಷೆಗೆ ಸೇರಿಸುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆದಿತ್ಯ-ಎಲ್‌1ನ ಮೋಟಾರ್‌ಗಳಿಗೆ ಅದು ಚಾಲನೆ ನೀಡಿತ್ತು.

“ಈ ಸಾಧನೆಯು ನಮ್ಮ ವಿಜ್ಞಾನಿಗಳ ಅವಿರತ ಶ್ರಮದ ಫಲವಾಗಿದ್ದು ಅತ್ಯಂತ ಕ್ಲಿಷ್ಟಕರ ಮತ್ತು ನಾಜೂಕು ಬಾಹ್ಯಾಕಾಶ ಯೋಜನೆಯನ್ನು ಭಾರತ ಕಾರ್ಯಗತಗೊಳಿಸಿದೆ. ಈ ಅಸಾಧಾರಣ ಕಾರ್ಯವನ್ನು ನಾನು ದೇಶದೊಂದಿಗೆ ಸೇರಿಕೊಂಡು ಶ್ಲಾಘಿಸುತ್ತೇನೆ, ಮಾನವ ಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧನೆಗಳನ್ನು ಮುಂದುವರಿಸುತ್ತೇವೆ,” ಎಂದು ಪ್ರಧಾನಿ ಹೇಳಿದ್ದಾರೆ.

Leave a Comment