ಮಂಜೇಶ್ವರ: ಟಿಪ್ಪರ್ ಲಾರಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದ ಯುವಕ ಆಸ್ಪತ್ರೆಗೆ ಸಾಗಿಸುವ ಮಧೈ ಮೃತಪಟ್ಟ ಘಟನೆ ನಡೆದಿದೆ. ಪೈವಳಿಕೆ ಬಾಯಾರುಪದವು ಬಳಿಯ ಅಬ್ದುಲ್ಲರವರ ಪುತ್ರ ಮುಹಮ್ಮದ್ ಆಸೀಫ್(29) ಮೃತಪಟ್ಟ ಯುವಕ. ಇಂದು ಮುಂಜಾನೆ ಇವರು ಕಾಯರ್ ಕಟ್ಟೆ ಬಳಿಯಲ್ಲಿ ಟಿಪ್ಪರ್ ಲಾರಿಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು ಹೈವೇ ಪೊಲೀಸ್ ತಂಡ ಹಾಗೂ ಊರವರು ಸೇರಿ ಬಂದ್ಯೋಡು ಆಸ್ಪತ್ರೆಗೂ ಆನಂತರ ಕುಂಬಳೆ ಸಹಕಾರಿ ಆಸ್ಪತ್ರೆಗೂ ಕೊಂಡೊಯ್ದರು.ಈ ವೇಳೆ ಮುಹಮ್ಮದ್ ಆಸೀಫ್ ಮೃತಪಟ್ಟಿದ್ದರು. ಟಿಪ್ಪರ್ ಚಾಲಕನಾದ ಮುಹಮ್ಮದ್ ಆಸೀಫ್ ಗೆ ಇಂದು ಮುಂಜಾನೆ 2 ಗಂಟೆಯ ವೇಳೆ ಗೆಳೆಯನೋರ್ವ ಪೋನ್ ಮಾಡಿ ಕೂಡಲೇ ಉಪ್ಪಳಕ್ಕೆ ಬರುವಂತೆ ಹೇಳಿದನೆನ್ನಲಾಗಿದೆ.
ಅದರಂತೆ ಮುಹಮ್ಮದ್ ಆಸಿಫ್ ಮನೆಯಿಂದ ಟಿಪ್ಪರ್ ನಲ್ಲಿ ಹೊರಟಿದ್ದ. ಆದರೆ ಬಹಳ ಹೊತ್ತಾದರೂ ಆಸೀಫ್ ತಲುಪದ ಹಿನ್ನೆಲೆಯಲ್ಲಿ ಗೆಳೆಯ ಹುಡುಕಾಡಿದಾಗ ಆಸೀಫ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದರೆನ್ನಲಾಗಿದೆ.
ಘಟನೆ ತಿಳಿದು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಟಿಪ್ಪರ್ ಲಾರಿಯೊಳಗೆ ರಕ್ತದ ಕಲೆಗಳು ಕಂಡು ಬಂದಿದ್ದು, ಆಸೀಫ್ ನ ಚಪ್ಪಲಿ ಟಿಪ್ಪರ್ ಹೊರಕ್ಕೆ ಬಿದ್ದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.