ಪೊಲೀಸ್ ಇಲಾಖೆಯಲ್ಲಿ ಶಿಸ್ತು ಪಾಲನೆಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಖಡಕ್ ಸೂಚನೆ ನೀಡಿದ್ದಾರೆ. ಇತ್ತೀಚಿಗೆ ಖಾಸಗಿ ವ್ಯಕ್ತಿಗಳ ಜೊತೆಗೂಡಿ ಸಮಾರಂಭಗಳಲ್ಲಿ ಪೊಲೀಸರು ಭಾಗವಹಿಸುವುದು.ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಭಾಗಿಯಾಗುವುದು, ಠಾಣೆಗಳಲ್ಲಿ ಹುಟ್ಟು ಹಬ್ಬ, ವಾರ್ಷಿಕೋತ್ಸವಗಳ ಆಚರಣೆ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರು ಶಿಸ್ತು ಪಾಲನೆಗೆ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.
ರೌಡಿಶೀಟರ್, ಸಮಾಜ ಘಾತುಕ ವ್ಯಕ್ತಿಗಳು, ಅಪರಾಧ ಹಿನ್ನೆಲೆಯುಳ್ಳವರ ಜೊತೆ ಅಧಿಕಾರಿ ಮತ್ತು ಸಿಬ್ಬಂದಿ ಯಾವುದೇ ರೀತಿಯ ಸಂಬಂಧ ಹೊಂದಿರುವಂತಿಲ್ಲ. ಪೊಲೀಸ್ ಠಾಣೆ, ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ, ಎಸಿಪಿ ಕಚೇರಿಗಳಲ್ಲಿ ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ ಸೇರಿ ಖಾಸಗಿ ಕಾರ್ಯಕ್ರಮ ಆಚರಣೆ ಮಾಡುವಂತಿಲ್ಲ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸೂಕ್ತವಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಆಯೋಜಿಸಿದ
ವ್ಯಕ್ತಿ ಮತ್ತು ಸಂಘ ಸಂಸ್ಥೆಗಳ ಪೂರ್ವಾಪರ ತಿಳಿದುಕೊಳ್ಳಬೇಕು. ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗಾವಣೆ, ಮುಂಬಡ್ತಿ ವೇಳೆ ಸ್ವಾಗತ ಮತ್ತು ಬೀಳ್ಕೊಡುಗೆ ಕಾರ್ಯಕ್ರಮಗಳಲ್ಲಿ ಪೊಲೀಸ್ ಸಿಬ್ಬಂದಿ ಹೊರತು ಪಡಿಸಿ ಖಾಸಗಿ ವ್ಯಕ್ತಿಗಳಿಗೆ ನಿರ್ಬಂಧ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಸಭೆ ಸಮಾರಂಭಗಳಿಗೆ ಸಿಬ್ಬಂದಿಯಿಂದ ಹಣ ಸಂಗ್ರಹಿಸುವಂತಿಲ್ಲ. ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಘಟಕಾಧಿಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.















