ಕುವೈತ್ ಅಗ್ನಿ ದುರಂತ : ಮೃತ ವಿಜಯ ಕುಮಾರ್ ಕುಟುಂಬಕ್ಕೆ ರೂ.5 ಲಕ್ಷ ಘೋಷಿಸಿದ ಸಿ.ಎಂ ಸಿದ್ದರಾಮಯ್ಯ.

Coastal Bulletin
ಕುವೈತ್ ಅಗ್ನಿ ದುರಂತ : ಮೃತ ವಿಜಯ ಕುಮಾರ್ ಕುಟುಂಬಕ್ಕೆ ರೂ.5 ಲಕ್ಷ ಘೋಷಿಸಿದ ಸಿ.ಎಂ ಸಿದ್ದರಾಮಯ್ಯ.

ಬೆಂಗಳೂರು: 'ಕುವೈತ್‌ ಅಗ್ನಿ ದುರಂತದಲ್ಲಿ ಸಾವಿಗೀಡಾಗಿರುವ ಜಿಲ್ಲೆಯ ಆಳಂದ ತಾಲೂಕಿನ ಸರಸಂಬ ಗ್ರಾಮದ 40 ವರ್ಷದ ವಿಜಯ ಕುಮಾ‌ರ್ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಕುವೈತ್ ಅಗ್ನಿ ದುರಂತ ಮೃತಪಟ್ಟಿರುವ ಕೇರಳ ನಿವಾಸಿಗಳ ಕುಟಂಬಕ್ಕೆ ಅಲ್ಲಿನ ಸರಕಾರ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಅದರಂತೆಯೇ ಕರ್ನಾಟಕ ಸರಕಾರವೂ ಆರ್ಥಿಕ ನೆರವು ಘೋಷಿಸಬೇಕೆಂದು ರಾಜ್ಯ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತ ವಿಜಯಕುಮಾರ್ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒದಗಿಸಲು ಸೂಚಿಸಿದ್ದಾರೆ.

ಕಳೆದ ಬುಧವಾರ ಕುವೈತ್ ನ ದಕ್ಷಿಣ ನಗರವಾದ ಮಂಗಾಫ್ ನಗರದ ಆರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ. ವಸತಿ ಸೌಲಭ್ಯದಲ್ಲಿರುವ 176 ಭಾರತೀಯ ಕಾರ್ಮಿಕರಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಉಳಿದವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಇದಾದ ಬಳಿಕ ಗುರುವಾರ ಕುವೈತ್‌ನ ಅಧಿಕಾರಿಗಳು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದ

45 ಭಾರತೀಯರು ಮತ್ತು ಮೂವರು ಫಿಲಿಪಿನೋ ಪ್ರಜೆಗಳ ಶವಗಳನ್ನು ಗುರುತಿಸಿದ್ದಾರೆ. ಘಟನೆಯ ಕುರಿತು ತ್ವರಿತವಾಗಿ ತನಿಖೆ ನಡೆಸುವುದಾಗಿ ಕುವೈತ್ ಪ್ರತಿಜ್ಞೆ ಮಾಡಿದೆ ಮತ್ತು ಸಂತ್ರಸ್ತರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲು ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿತ್ತು.

ಮೃತರಲ್ಲಿ ಕೇರಳದ 23, ತಮಿಳುನಾಡಿನ ಏಳು, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಸೇರಿದ್ದಾರೆ.

Leave a Comment