ನವದೆಹಲಿ: ಖಲಿಸ್ತಾನ ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪಿತೂರಿಯಿದೆ ಎಂದು ಕೆನಡಾ ಆರೋಪಿಸಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದೆ. ಸೋಮವಾರ ಈ ಹೇಳಿಕೆ ಪ್ರಕಟಗೊಂಡ ಬೆನ್ನಲ್ಲೇ ಭಾರತ ಅದನ್ನು ಖಂಡಿಸಿತ್ತು. ಇದೀಗ ಅಲ್ಲಿರುವ ಹೈಕಮಿಷನರ್ ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಸ್ ಕರೆಯಿಸಿಕೊಂಡಿದೆ. ಅಲ್ಲದೇ ಇದೀಗ ಭಾರತದಲ್ಲಿರುವ ಆರು ಕೆನಡಾ ರಾಜತಾಂತ್ರಿಕ ಅಧಿಕಾರಿಗಳು ದೇಶದಿಂದ ಹೊರಹಾಕಲು ನಿರ್ಧಿರಿಸಿದೆ. ಅಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯಲು ಸೂಚಿಸಲಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಸ್ಟೀವರ್ಟ್ ರಾಸ್ ವೀಲರ್ (ಹಂಗಾಮಿ ಹೈ ಕಮಿಷನರ್) , ಪ್ಯಾಟ್ರಿಕ್ ಹೆಬರ್ಟ್ (ಡೆಪ್ಯುಟಿ ಹೈ ಕಮಿಷನರ್), ಮೇರಿ ಕ್ಯಾಥರೀನ್ ಜೋಲಿ, (ಫಸ್ಟ್ ಸೆಕ್ರೆಟರಿ) ಲ್ಯಾನ್ ರಾಸ್ ಡೇವಿಡ್ ಟ್ರೈಟ್ಸ್ (ಫಸ್ಟ್ ಸೆಕ್ರೆಟರಿ), ಆಡಮ್ ಜೇಮ್ಸ್ ಚುಪ್ಕಾ((ಫಸ್ಟ್ ಸೆಕ್ರೆಟರಿ) ಪೌಲಾ ಒರ್ಜುಯೆಲಾ (ಫಸ್ಟ್ ಸೆಕ್ರೆಟರಿ) ಈ ಆರು ಅಧಿಕಾರಿಗಳಿಗೆ ಅಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯಲು ಭಾರತ ಸರ್ಕಾರ ಸೂಚಿಸಿದೆ.
ರಾಜತಾಂತ್ರಿಕರನ್ನು ವಾಪಸ್ ಕರೆಯಿಸಿಕೊಂಡ ಭಾರತ
ಸಿಖ್ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಗೆ ರಾಯಭಾರಿಯನ್ನು ಸಂಪರ್ಕಿಸುವ ಕೆನಡಾದ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ ನಂತರ ಭಾರತ, ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ. ಈ ವೇಳೆ ನಮ್ಮವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಕೆನಡಾ ಸರ್ಕಾರದ ಬದ್ಧತೆಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿದೆ.
ಉಗ್ರವಾದ ಮತ್ತು ಹಿಂಸಾಚಾರದ ವಿಚಾರದಲ್ಲಿ ಕೆನಡಾ ಪ್ರಧಾನಿ ಟ್ರುಡೊ ಸರ್ಕಾರದ ಕ್ರಮಗಳು ಅವರ ಸುರಕ್ಷತೆಗೆ ಅಪಾಯ ಎಂಬುದನ್ನು ಭಾರತ ಒತ್ತಿ ಹೇಳಿದೆ. ನಮ್ಮ ರಾಜತಾಂತ್ರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕೆನಡಾ ಸರ್ಕಾರದ ಬದ್ಧತೆ ಬಗ್ಗೆ ನಮಗೆ ನಂಬಿಕೆ ಇಲ್ಲ. ಆದ್ದರಿಂದ, ಹೈಕಮಿಷನರ್ ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಕರೆಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.