ಸಂತೋಷ್ ಕುಲಾಲ್ ನೆತ್ತರಕೆರೆ.

ಪ್ರತಿಭೆಯು ಪ್ರತಿಯೊಬ್ಬರಲ್ಲೂ ಅಡಕವಾಗಿರುತ್ತದೆ‌. ಆ ಪ್ರತಿಭೆ ಬೆಳಕಿಗೆ ಬರಬೇಕಾದರೆ ಆ ವ್ಯಕ್ತಿಯ ಪರಿಶ್ರಮದ ಜೊತೆಗೆ ಮುಖ್ಯವಾಗಿ ಬೇಕಾದದ್ದು ಹೆತ್ತವರ ಪ್ರೋತ್ಸಾಹ ಹಾಗೂ ಪ್ರತಿಭೆಗೆ ತಕ್ಕುದಾದ ವೇದಿಕೆ, ಶ್ರದ್ಧೆ, ಏಕಾಗ್ರತೆ, ಸಾಧನೆಯ ತುಡಿತ. ಅದೇ ರೀತಿ ಹಿಂದೊಬ್ಬ ಗುರು-ಮುಂದೊಂದು ಗುರಿ, ಇವಿಷ್ಟು ನಿಶ್ಚಲವಾಗಿ ನಮ್ಮೊಳಗೆ ಮನೆಮಾಡಿ ನಿಂತದ್ದೇ ಆದಲ್ಲಿ ಆ ಸಾಧನೆಗೆ ಪೂರಕವಾದ ಪ್ರತಿಫಲ ಖಚಿತ. ಈ ಎಲ್ಲಾ ಗುಣಗಳನ್ನು ಮೈಗುಡಿಸಿಕೊಂಡ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಯ ಕೃಷಿ ಮಾಡುತ್ತಿರುವ ಬಹುಮುಖ ಪ್ರತಿಭೆ ವಿದುಷಿ ಶ್ರೀಮತಿ ಮಲ್ಲಿಕಾ ವೇಣುಗೋಪಾಲ್ ಜ್ಯೋತಿಗುಡ್ಡೆ.

ಜ್ಯೋತಿಗುಡ್ಡೆ ಎಂಬುದು ಬಂಟ್ವಾಳ ತಾಲೂಕಿನ ತುಂಬೆ ಕಳ್ಳಿಗೆ ಗ್ರಾಮಗಳಿಗೆ ತಾಗಿ ನಿಂತಿರುವ ದೇವರಾಧನೆ, ಕಲಾರಾಧನೆಯ ಕೇಂದ್ರ ಸ್ಥಾನ. ಇಲ್ಲಿಯ ಸಾಂಸ್ಕೃತಿಕ ದೈವಿಕ ಪರಿಸರದಲ್ಲಿ ಬೆಳೆದ ಮಲ್ಲಿಕಾರವರು ಸಂಗೀತ, ಸಾಹಿತ್ಯ, ಭರತನಾಟ್ಯ, ಯಕ್ಷಗಾನ,ರಂಗಭೂಮಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವುದರೊಂದಿಗೆ, ಸಂಪನ್ಮೂಲ ವ್ಯಕ್ತಿಯಾಗಿ, ತರಬೇತುದಾರರಾಗಿ, ಮಹಿಳಾ ಸಬಲೀಕರಣ, ದೌರ್ಜನ್ಯದ ವಿರುದ್ಧ ಹೋರಾಟಗಾರರಾಗಿ ವಿವಿಧ ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡವರು.

ಜ್ಯೋತಿಗುಡ್ಡೆಯ ಶ್ರೀಮತಿ ಗುಲಾಬಿ- ಶ್ರೀ ಬಾಬು ಪೂಜಾರಿ ದಂಪತಿಗಳ ಪುತ್ರಿಯಾದ

ಮಲ್ಲಿಕಾರವರು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಪ್ರತಿಭಾನ್ವಿತೆ. ಎಳವೆಯಲ್ಲೇ ಯಕ್ಷಗಾನದಲ್ಲಿ ವೇಷ ಮಾಡುವ ತುಡಿತ. ಪರಿಣಾಮವಾಗಿ ತರಿಕಿಟ ಕಲಾ ಕಮ್ಮಟದಲ್ಲಿ ನಾಟ್ಯ ತರಗತಿ ನಡೆಸುತ್ತಿದ್ದ ಉಚ್ಚಿಲದ ದಯಾನಂದ ಪಿಲಿಕೂರು ಇವರಿಂದ ಯಕ್ಷಗಾನದ ಹೆಜ್ಜೆಗಳನ್ನು ಕಲಿತು ಇಪ್ಪತರ ಹರೆಯದಲ್ಲಿ ರಂಗಸ್ಥಳ ಪ್ರವೇಶ ಮಾಡಿದರು. ಮುಂದೆ ನಾನಾ ರೀತಿಯ ಪಾತ್ರವನ್ನು ಮಾಡಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ತುಳು ಯಕ್ಷಗಾನದಲ್ಲೂ ಪಾತ್ರ ನಿರ್ವಹಿಸಿದರು. ಬಣ್ಣದ ವೇಷಧಾರಿಯಾಗಿ ಅನೇಕ ಹಿರಿಯ ಕಲಾವಿದರಿಂದ ಸೈ ಎನಿಸಿದರು.

Leave a Comment