ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ತರಿಕಿಟ ಕಲಾ ಕಮ್ಮಟದ 23ನೇ ವಾರ್ಷಿಕೋತ್ಸವ ಡಿಸೆಂಬರ್ 25ರಂದು ಬಂಟ್ವಾಳ ತಾಲೂಕು, ತುಂಬೆಯ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಸಾಂಗತ್ಯ ಕಾರ್ಕಳದ ಶ್ರೀ ಕುಮಾರ್, ಅಝೀಮ್ ಪ್ರೇಮ್ ಫೌಂಡೇಶನ್‌ನ ಉಮಾಶಂಕರ್ ಪೆರಿಯೋಡಿ, ಕವಿತಾ ಮೈಸೂರು, ಸಂವಾದ ಯುವ ಸಂಪನ್ಮೂಲ ಕೇಂದ್ರ ಮಂಗಳೂರು ಇದರ ಪವಿತ್ರಾ ಎಂ ಹಾಗೂ ಚಾಮರಾಜ ನಗರದ ಓಪನ್ ಲರ್ನಿಂಗ್ ಅಕಾಡೆಮಿ ತಂಡದ ಸದಸ್ಯರು ಉಪಸ್ಥಿತರಿದ್ದರು.
ಕಲಾವಿದರಾದ ಕು ಕೃತಿ ಬಂಟ್ವಾಳ ಇವರು "ಪ್ರೀತಿಗಾಗಿ ನೃತ್ಯ" ಎಂಬ ವಿಶೇಷವಾದ ಜನ ಜಾಗೃತಿ ಮೌಲ್ಯವುಳ್ಳ ಭರತನಾಟ್ಯ ಕಾರ್ಯಕ್ರಮ ನೀಡಿದರು. ಮೊದಲಿಗೆ ಭಾರತ ಸಂವಿಧಾನದ ಪ್ರಸ್ತಾವನೆಯ ಸಾರವಾದ ನ್ಯಾಯ,ಸಮಾನತೆ ಮತ್ತು ಬಂಧುತ್ವದ ಕುರಿತು ನಾಗರಿಕರಿಗೆ ಸಾಮೂಹಿಕ ಪ್ರತಿಜ್ಞೆಯನ್ನು ನೆನಪಿಸುವ ನೃತ್ಯವು ಸೊಗಸಾಗಿ ಭರತನಾಟ್ಯ ಅಭಿನಯವನ್ನು ಪ್ರಸ್ತುತ ಪಡಿಸಿದರು. ಸಂತ ಕಬೀರರ ದೋಹೆಯ ಕನ್ನಡ ರೂಪಾಂತರಗೊಳಿಸಿದ ಸಾಹಿತ್ಯದ ಮಾನವ ಧರ್ಮ ಸಾರುವ ಸಂದೇಶದ ಹಾಡು ಹಾಗೂ ತಕ್ಕುದಾದ ಅಭಿನಯ ನೆರೆದ ಸಭಿಕರ ಮನಸೆಳೆಯಿತು. ರಾಮಾಯಣದ ಅರಣ್ಯ ಕಾಂಡದಲ್ಲಿ ಬರುವ ಶೂರ್ಪನಖೆಯ ವಾಂಛೆಯ ಪ್ರಸಂಗ ನವರಸ ಅಭಿನಯದ ಗೀತ ಸಾಹಿತ್ಯದೊಂದಿಗೆ ಮೆರುಗು ನೀಡಿತು. ಅರ್ಥಹೀನ ಹಿಂಸೆಯ ಅಂಧಕಾರವನ್ನು ಮೀರುವ ಶಕ್ತಿ ಹಾಡು ʼಎಲುಬಿನ ಹಂದರದೊಳಗೆʼ
ಹಾಗೂ ಕಡೆಯದಾಗಿ ಶಾಂತಿ, ಸಮಾನತೆ ಮತ್ತು ಸಹಾನುಭೂತಿಯ ಸಂದೇಶವನ್ನು ಸಾರುವ, ಭಿನ್ನಾಭಿಪ್ರಾಯಗಳನ್ನು ಮೀರಿ ಒಟ್ಟಿಗೆ ಉಜ್ವಲ ಭವಿಷ್ಯದ ಕಡೆಗೆ ಕೆಲಸಮಾಡಲು ಕರೆ ಕೊಡುವ "ದಿ ಗ್ರೇಟ್ ಡಿಕ್ಟೇಟರ್" ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಅವರ ಪ್ರಸಿದ್ಧ ಭಾಷಣ ಸಾರಂಶ ಭರತನಾಟ್ಯ ರೂಪದಲ್ಲಿ ಪ್ರಸ್ತುತಿ ಗೈದರು. ಸುಮಾರು ಒಂದು ಘಂಟೆಗಳ ಕಾಲ ನಡೆದ ಈ ಪ್ರೀತಿಗಾಗಿ ನಾಟ್ಯ ಎಂಬ ಕಾರ್ಯಕ್ರಮವು ನೆರೆದ ಸಭಿಕರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಮುಖ್ಯ ಕಾರ್ಯಕ್ರಮದ ಜೊತೆಗೆ ದಕ್ಷಾ ಬಾದಲ್ ಜ್ಯೋತಿಗುಡ್ಡೆ ಇವರಿಂದ ಕೊಳಲು ವಾದನ, ತರಿಕಿಟ ತಂಡದಿಂದ ಸಮೂಹ ಗಾಯನ, ಸ್ಥಳೀಯ ಮಕ್ಕಳಿಂದ ಸಂಗೀತ ಪ್ರದರ್ಶನ ನಡೆಯಿತು.
ಕು ತೃಪ್ತಿ ಪೆರ್ಲಾಪ್ ಮತ್ತು ಕು. ಚೈತ್ರ ಪೆರಿಯೋಡಿ ಕಾರ್ಯಕ್ರಮ ನಿರೂಪಣೆಗೈದರು. ಧ್ವನಿ ದರ್ಕಾಸು ಸ್ವಾಗತಿಸಿದರು. ತರಿಕಿಟ ಕಲಾ ಕಮ್ಮಟದ ನಿರ್ದೇಶಕ ಉದಯ ಕುಮಾರ್ ಜ್ಯೋತಿಗುಡ್ಡೆ ಇವರು ತರಿಕಿಟ ಸಂಸ್ಥೆಯ ೨೩ ವರ್ಷ ನಡೆದು ಬಂದುದರ ಬಗ್ಗೆ ಪರಿಚಯ ನೀಡಿದರು. ಭರತನಾಟ್ಯ ನಾಟ್ಯ ವಿದುಷಿ ಮಲ್ಲಿಕಾ ವೇಣುಗೋಪಾಲ್ ವಂದನಾರ್ಪಣೆ ಸಲ್ಲಿಸಿದರು.










