Coastal Bulletin

ಕಳೆದ ಒಂದು ತಿಂಗಳಿಂದ ಕಳ್ಳಿಗೆ ತುಂಬೆ ಬಿಮೂಡ ಹಾಗೂ ನಡು ಗ್ರಾಮದ ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳು, ಮಾತೃಶಕ್ತಿ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ನಿರಂತರವಾಗಿ ಕರಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಬ್ರಹ್ಮಕಲಶದ ಸಂದರ್ಭ ದೇವಸ್ಥಾನದ ಪರಿಸರ ಹೊಸರೂಪವನ್ನು ಪಡೆದು ಬ್ರಹ್ಮಕಲಶವು ಯಶಸ್ವಿಯಾಗಿ ನೆರವೇರುವ ಸಂಕೇತ ಇಂದೇ ಕಾಣುತ್ತಿದೆ. ಶ್ರದ್ಧೆಯಿಂದ ದೇವರ ಸೇವೆಯಲ್ಲಿ ಭಾಗವಹಿಸುತ್ತಿರುವ ಸಾವಿರಾರು ಕಾರ್ಯಕರ್ತರ ಶ್ರಮ ನಿಜಕ್ಕೂ ಅಭಿನಂದನಾರ್ಹ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತಿಳಿಸಿದರು.

ಅವರು ಭಾನುವಾರ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ ಆಯೋಜಿಸಿದ ಕರಸೇವೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಳಿಕ ಕರಸೇವಕರ ಜೊತೆಗೆ ಕುಳಿತು ಉಪಹಾರ ಸೇವಿಸಿ ಸರಳತೆಯನ್ನು ಮೆರೆದರು.ದೇವಸ್ಥಾನದಲ್ಲಿ ನಡೆಯುತ್ತಿರುವ ವಿವಿಧ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದ ಅವರು, ಅಗತ್ಯ ಬಿದ್ದಲ್ಲಿ ಇನ್ನಷ್ಟು ಅನುದಾನವನ್ನು ಒದಗಿಸಿ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಸದಸ್ಯರಾದ ದಿವಾಕರ ಶೆಟ್ಟಿ ಕುಪ್ಪಿಲ, ಸತೀಶ್ ಶೆಟ್ಟಿ ಮೊಡಂಕಾಪು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಕೇಶವ ದೈಪಲ, ಅಮಿತಾ ವಿಶ್ವನಾಥ್ ದಾಸರಕೋಡಿ, ಉಮಾ ಲಿಂಗಪ್ಪ ತುಂಬೆ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ಸಂಚಾಲಕ ತೇವು ತಾರನಾಥ ಕೊಟ್ಟಾರಿ ಫರಂಗಿಪೇಟೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಪ್ರಮುಖರಾದ ಮನೋಜ್ ವಳವೂರು, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ಮನೋಹರ ಕಂಜತ್ತೂರು, ರಾಘವ ಕಾರಂತ ಕನಪಾಡಿ, ವೇಣುಗೋಪಾಲ ಶೆಟ್ಟಿ ಕುಪ್ಪಿಲಗುತ್ತು, ವಿಶ್ವನಾಥ್ ಕುಲಾಲ್ ನೆತ್ತರಕೆರೆ, ಪೂವಪ್ಪ ಸಪಲ್ಯ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.

ಈ ದಿನ ದೇವಂದಬೆಟ್ಟು, ಜಾರಂದಗುಡ್ಡೆ, ಬೆಂಜನಪದವು, ವಳವೂರು, ಪಚ್ಚಿನಡ್ಕ, ಕಾಮಾಜೆ, ಪಲ್ಲಮಜಲು, ತುಂಬೆ, ಜುಮಾದಿಗುಡ್ಡೆ ಭಾಗದ ಸ್ವಯಂಸೇವಕರು ಕರಸೇವೆಯಲ್ಲಿ ಪಾಲ್ಗೊಂಡಿದ್ದರು. ಗೋಶಾಲೆಯ ಕೊಠಡಿ ಒಳಗೆ ಮತ್ತು ಹೊರಭಾಗದಲ್ಲಿ ಕಲ್ಲುಹಾಸು, ಮರಳು

ಪೂರೈಕೆ, ದೇವಸ್ಥಾನ ಒಳಾಂಗಣ ಮತ್ತು ಹೊರಾಂಗಣ ಸ್ವಚ್ಛತೆ, ಒಳಚರಂಡಿ ಪೈಪ್ ಲೈನ್, ಗ್ರಾನೈಟ್ ಮತ್ತು ಚಪ್ಪರ ದುರಸ್ತಿ ಇನ್ನಿತರ ಹಲವು ಕೆಲಸಗಳು ನೆರವೇರಿತು.

ಮುಂದಿನ ಭಾನುವಾರ ಪೈಂಟಿಂಗ್ ಶ್ರಮಸೇವೆ: ಕಳ್ಳಿಗೆ, ತುಂಬೆ, ಬಿ.ಮೂಡ, ನಡು ನಾಲ್ಕು ಗ್ರಾಮದ ನುರಿತ ಪೈಂಟರ್ ಸ್ವಯಂಸೇವಕರನ್ನು ಸಂಪರ್ಕಿಸಿ, ಇತರ ಸ್ವಯಂಸೇವಕರನ್ನು ಜೋಡಿಸಿ ಮುಂದಿನ ಭಾನುವಾರ ದೇವಸ್ಥಾನದ ಪೈಂಟಿಂಗ್ ಕೆಲಸ ಶ್ರಮದಾನದ ಮೂಲಕ ನೆರವೇರಿಸಲಾಗುವುದು ಎಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ.

ಬ್ಯಾನರ್ ಬಂಟಿಂಗ್ಸ್, ಧ್ವಜ, ದ್ವಾರ ನಿರ್ಮಾಣಕ್ಕೆ ಪೂರ್ವತಯಾರಿಯಲ್ಲಿ ಯುವಕರು ತೊಡಗಿದ್ದರು. ಅಲ್ಲದೆ ದೇವಸ್ಥಾನ ಸಂಪರ್ಕಿಸುವ ಹಲವು ರಸ್ತೆಗಳ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿ, ಮಣ್ಣುಗಳನ್ನು ತುಂಬಿಸಿ ಸಿದ್ಧಪಡಿಸುವ ಕೆಲಸವೂ ಇನ್ನೊಂದೆಡೆ ನಡೆಯುತ್ತಿದೆ.

ಹಸಿರುವಾಣಿ ಹೊರೆಕಾಣಿಕೆ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಉಪಸಮಿತಿ ಪ್ರಮುಖರು ನಾಲ್ಕು ಗ್ರಾಮಗಳ ಮೂಲೆಮೂಲೆಯಲ್ಲಿ ಹಲವು ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಮನೆಮನೆ ಸಂಪರ್ಕ ಅಭಿಯಾನ ಮೂಲಕ ಬಾಕಿ ಉಳಿದಿರುವ ಕಡೆಗಳಿಗೆ ಆಮಂತ್ರಣ ಪತ್ರ ತಲುಪಿಸುವ ಕೆಲಸ ನಡೆಯುತ್ತಿದೆ. ಸಂಧ್ಯಾ ಭಜನೆಗೆ ಭಜಕರನ್ನು ಸ್ವಾಗತಿಸಲು ಮಾತೃಸಮಿತಿ ದೇವಸ್ಥಾನದ ರಾಜಾಂಗಣಕ್ಕೆ ಸೆಗಣಿಯನ್ನು ಸಾರಿ, ರಂಗೋಲಿಯನ್ನು ಬಿಡಿಸಿ ದೀಪವನ್ನು ಅಲಂಕರಿಸುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲಾ ವಿಭಾಗಗಳಲ್ಲಿ ಉಪಸಮಿತಿ, ಕೇಂದ್ರ ಸಮಿತಿಯ ಸೂಚನೆಯಂತೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಒಂದು ಮಾದರಿ ಬ್ರಹ್ಮಕಲಶೋತ್ಸವ ನೆರವೇರಿಸಲು ಎಲ್ಲಾ ರೀತಿಯ ಪೂರ್ವತಯಾರಿ ಭಾರೀ ಅಚ್ಚುಕಟ್ಟಾಗಿ ನಡೆಯುತ್ತಿದೆ

Leave a Comment