ಬಂಟ್ವಾಳ : ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯೋರ್ವನ ಮೇಲೆ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷ , ನಮ್ಮ ನ್ಯೂಸ್ ಚಾನೆಲ್ ನ ಮಾಲಕ ಪ್ರಶಾಂತ್ ಪುಂಜಾಲಕಟ್ಟೆ ಅವರ ಬಗ್ಗೆ ಬೆಳ್ತಂಗಡಿ ತಾಲೂಕಿನ ಕುಕ್ಕಳ , ಕೊಯಕ್ಕರಿ ನಿವಾಸಿ ಹೇಮಂತ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿ ಗೌರವಕ್ಕೆ ದಕ್ಕೆ ಮಾಡಿದ್ದಾರೆ ಎಂದು ಅವರು ಎಸ್.ಪಿ.ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಶಾಂತ್ ಪುಂಜಾಲಕಟ್ಟೆ ಅವರು ಡಿ.25 ರಂದು ಪುಂಜಾಲಕಟ್ಟೆಯಲ್ಲಿರುವ ಬಸವೇಶ್ವರ ದೇವಸ್ಥಾನದ ಅಧ್ಯಕ್ಷನಾಗಿ ಆಯ್ಕೆಯಾದ ಬೆನ್ನಲ್ಲೆ ಈ ಪೋಸ್ಟ್ ಹಾಕಿದ್ದು, ವೈಯಕ್ತಿಕ
ತೇಜೋವದೆಗೆ ಪ್ರಯತ್ನಿಸುತ್ತಿದ್ದಾನೆ, ಇದರ ಜೊತೆಗೆ ಹತ್ತಾರು ವರ್ಷಗಳ ಇತಿಹಾಸವಿರುವ ಪ್ರಸಿದ್ದ ದೇವಸ್ಥಾನವಾದ ಬಸವೇಶ್ವರ ದೇವಸ್ಥಾನದ ಗೌರವವನ್ನು ಹಾಳುಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರು ತನಿಖೆ ನಡೆಸಿ, ಈತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿದ ಎಸ್.ಪಿ.ಹೃಷಿಕೇಶ್ ಭಗವಾನ್ ಸೋನಾವಣೆ ಅವರು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತವಾದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.














