Coastal Bulletin

ಬಂಟ್ವಾಳ:ಪ್ರಧಾನಿ ನರೇಂದ್ರ ಮೋದಿ ಅವರು 8 ವರ್ಷ ಆಡಳಿತಾವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ದೇಶದಲ್ಲೆಡೆ ಮೇ.30ರಿಂದ ಜೂ.15ರತನಕ 'ಬಿಜೆಪಿ ಜನರೊಂದಿಗೆ ದಿನಕ್ಕೆ 5 ಗಂಟೆ ಬೆರೆತು ಅವರಿಗೆ ಸರ್ಕಾರದ ಸಾಧನೆ ತಿಳಿಸುವ ಮೂಲಕ ಪಕ್ಷ ಬಲಿಷ್ಠಗೊಳಿಸುವ ವಿನೂತನ ಕಾರ್ಯಕ್ರಮ' ಆರಂಭಗೊಳ್ಳಲಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.

ಇಲ್ಲಿನ ಸ್ಪರ್ಶ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಕ್ಷೇತ್ರ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಅವರು ಅವರು ಮಾತನಾಡಿದರು. ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ಚಿದಾನಂದ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಜಿಲ್ಲಾ ಸಂಚಾಲಕ ರಾಮದಾಸ್ ಬಂಟ್ವಾಳ್ ಮಾತನಾಡಿ, 'ದೂರದರ್ಶಿತ್ವ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಸಹಿತ ರಾಜ್ಯ ಮತ್ತು ಜಿಲ್ಲೆ ಹಾಗೂ ತಾಲ್ಲೂಕು ಅಧ್ಯಕ್ಷರಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ' ಎಂದರು. ಒಟ್ಟು 17 ದಿನ ದುರ್ಬಲರು ಮತ್ತು ನಗರ ಬಡವರು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ,

ಮಹಿಳೆಯರು, ರೈತರು, ಮಾಧ್ಯಮ, ಸಾಮಾಜಿಕ ಜಾಲತಾಣ ವಿಭಾಗ ಹಾಗೂ ಸರ್ಕಾರಿ ಸೌಲಭ್ಯ ಪಡೆದ ಫಲಾನುಭವಿಗಳೊಂದಿಗೆ ಪ್ರತ್ಯೇಕ ಸಂವಹನ, ಬೈಕ್ ರ್ಯಾಲಿ ಮತ್ತಿತರ ಜವಾಬ್ದಾರಿ ಪೂರ್ಣಗೊಳಿಸುವ ಮೂಲಕ ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ವೇದಿಕೆ ನಿರ್ಮಾಣವಾಗಲಿದೆ ಎಂದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕರ್ತರ ಜವಾಬ್ದಾರಿ ಬಗ್ಗೆ ಮಾಹಿತಿ ಮಾತನಾಡಿದರು.

ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಬಿ.ಅರಳ, ರವೀಶ ಶೆಟ್ಟಿ ಕರ್ಕಳ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ಮತ್ತಿತರರು ಇದ್ದರು.

Leave a Comment