ಸೋರ್ಣಾಡುಬೈಲು: ಚುನಾವಣೆ ಬಹಿಷ್ಕಾರ ಬ್ಯಾನರ್ ತೆರವು. ಅಧಿಕಾರಿಗಳ ಭೇಟಿ, ತಡೆಗೋಡೆ ನಿರ್ಮಿಸುವ ಭರವಸೆ.

Coastal Bulletin
ಸೋರ್ಣಾಡುಬೈಲು: ಚುನಾವಣೆ ಬಹಿಷ್ಕಾರ ಬ್ಯಾನರ್ ತೆರವು. ಅಧಿಕಾರಿಗಳ ಭೇಟಿ, ತಡೆಗೋಡೆ ನಿರ್ಮಿಸುವ ಭರವಸೆ.

ಬಂಟ್ವಾಳ:ಇಲ್ಲಿನ ಪಂಜಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋರ್ಣಾಡುಬೈಲು ಎಂಬಲ್ಲಿ ಕುಸಿತಕ್ಕೀಡಾದ ತೋಡಿನ ಬಳಿ ತಡೆಗೋಡೆ ನಿರ್ಮಿಸಲು ಆಗ್ರಹಿಸಿ ಸ್ಥಳೀಯರು ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಅಳವಡಿಸಿದ್ದ ಬ್ಯಾನರ್ ಮಂಗಳವಾರ ತೆರವುಗೊಳಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿ ರಾಹುಲ್ ಕಾಂಬ್ಳೆ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಿಢೀರ್ ಭೇಟಿ ನೀಡಿ, ಮಳೆಗಾಲಕ್ಕೆ ಮುಂಚಿತವಾಗಿ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದ ಬಳಿಕ ಸ್ಥಳೀಯರು ಬ್ಯಾನರ್ ತೆರವುಗೊಳಿಸಿದರು.

ಕಳೆದ ಜುಲೈ ತಿಂಗಳು ಸುರಿದ ಭಾರೀ ಮಳೆಗೆ ಕಾಲುದಾರಿ ಒಂದು ಬದಿ ಸಂಪೂರ್ಣ ಕುಸಿತಕ್ಕೀಡಾಗಿದ್ದು, ಇಲ್ಲಿನ 6 ಮನೆಗಳಿಗೆ ಪ್ರತಿನಿತ್ಯ ಸಂಚರಿಸಲು ಅಡಚಣೆ ಉಂಟಾಗಿತ್ತು. ಈ ತಡೆಗೋಡೆ ನಿರ್ಮಿಸುವಲ್ಲಿ ತಾಲ್ಲೂಕು ಮತ್ತು ಜಿಲ್ಲಾಡಳಿತ ತೀರಾ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಸ್ಥಳೀಯರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ಬಳಿಕ ಚುನಾವಣೆ ಬಹಿಷ್ಕರಿಸುವುದಾಗಿ

ಬ್ಯಾನರ್ ಅಳವಡಿಸಿದ್ದರು. 

ತಾಲ್ಲೂಕು ಪಂಚಾಯಿತಿ ಪ್ರಭಾರ ಸಹಾಯಕ ನಿರ್ದೇ ಶಕ ವಿಶ್ವನಾಥ್, ಪಂಜಿಕಲ್ಲು ಗ್ರಾಮ ಪಂಚಾಯಿತಿ ಪಿಡಿಒ ಗೀತಾ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ಕೃಷ್ಣ ಎಂ. ಜೊತೆಗಿದ್ದರು. 

ಈ ತಡೆಗೋಡೆ ಕಾಮಗಾರಿಗೆ ರೂ 10 ಲಕ್ಷ ಅನುದಾನ ಅಗತ್ಯವಿದ್ದು, ಈಗಾಗಲೇ ಪಂಜಿಕಲ್ಲು ಗ್ರಾಮ ಪಂಚಾಯಿತಿ ವತಿಯಿಂದ ರೂ 1 ಲಕ್ಷ ಮೀಸಲಿಟ್ಟಿದೆ. ಇದೀಗ ತೋಡಿನಲ್ಲಿ ನೀರಿಲ್ಲದೆ ಕಾಮಗಾರಿ ಆರಂಭಿಸಲು ಅನುಕೂಲಕರವಾಗಿದ್ದು, ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಾರನಾಥ ಸಾಲ್ಯಾನ್ ಪ್ರತಿಕ್ರಿಯಿಸಿದ್ದಾರೆ.

Leave a Comment