Coastal Bulletin

ಬಂಟ್ವಾಳ : ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಿಲೆಬಸ್ ಕಲಿಕೆಯ ಮೂಲ ತತ್ವಗಳಿಗೆ ಸೀಮಿತವಾಗಿರುತ್ತದೆ. ವಿದ್ಯಾರ್ಥಿಗಳ ಜತೆಗೆ ಶಿಕ್ಷಕರೂ ಬದಲಾಗುತ್ತಿರುವ ಜ್ಞಾನ, ತಂತ್ರಜ್ಞಾನದ ಅರಿವನ್ನು ಗಳಿಸಿಕೊಂಡು ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳಲೇಬೇಕು. ಕರ್ತವ್ಯವನ್ನು ಪ್ರೀತಿಸುವುದರ ಜತೆಗೆ ಪರಿಪೂರ್ಣತೆಯ ತುಡಿತ, ಮೌಲ್ಯಗಳ ಬದುಕು ತಮ್ಮದಾಗಿಸಿಕೊಂಡಾಗ ಯಶಸ್ಸು ಜತೆಗೂಡುತ್ತದೆ ಎಂದು ಹಾಂಗ್ಯೋ ಐಸ್ಕ್ರೀಂ ಪ್ರೈ.ಲಿ. ಆಡಳಿತ ನಿರ್ದೇಶಕ ಪ್ರದೀಪ್ ಜಿ.ಪೈ ಹೇಳಿದರು.

ಅವರು ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೊತ್ಸವದ ಅಂಗವಾಗಿ ಗುರುವಾರ ಆರಂಭಗೊಂಡ ಮೂರು ದಿನಗಳ ರಾಜ್ಯಮಟ್ಟದ 'ಆಕೃತಿ' ತಾಂತ್ರಿಕ, ಸಾಂಸ್ಕೃತಿಕ ಉತ್ಸವವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿಂದು ಎಂಜಿನಿಯರಿಂಗ್ ಶಿಕ್ಷಣ ಹೆಚ್ಚಿನವರ ಆಯ್ಕೆಯಾಗಿದೆ. ದೇಶದಲ್ಲಿ ವಾರ್ಷಕ 10 ಲಕ್ಷ , ರಾಜ್ಯದಲ್ಲಿ 1.10 ಲಕ್ಷಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಪದವೀಧರರಾಗುತ್ತಿದ್ದರೂ ಕೌಶಲ, ಸಂವಹನ ಕೊರತೆಯಿಂದ ಶೇ 40 ರಷ್ಟು ಮಂದಿ ಮಾತ್ರ ಉದ್ಯೋಗಾರ್ಹತೆ ಪಡೆಯುತ್ತಿದ್ದಾರೆ. ಹಾಗಾಗಿ ಈ ಸ್ಪರ್ಧಾತ್ಮಕ ಯುಗದಲ್ಲಿ ಆಸಕ್ತಿ,ಬದ್ಧತೆಯ ಜತೆಗೆ ಬದಲಾವಣೆಗಳ ಜತೆ ಬದಲಾಗುತ್ತಿರಬೇಕು ಎಂದ ಅವರು ವಿಶ್ವ ಕೊಂಕಣಿ ಕೇಂದ್ರವು ಈಗಾಗಲೇ ರೂ. 20 ಕೋಟಿಗಳಷ್ಟು ವಿದ್ಯಾರ್ಥಿ ವೇತನ ವಿತರಿಸಿ 5220ಕ್ಕೂ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿಯನ್ನೂ ನೀಡಿ ಉದ್ಯೋಗಗಳಿಕೆಯಲ್ಲಿ ಶೇ 78ರ ಯಶಸ್ಸು ಕಂಡಿದೆ ಎಂದರು.

ಕಾಲೇಜು ಸಂಚಾಲಕ, ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ರಂಗನಾಥ ಭಟ್ ಮಾತನಾಡಿ ಆಕೃತಿಯ ಯಶಸ್ಸಿನ ಲ್ಲಿ ವಿದ್ಯಾರ್ಥಿಗಳ ಉತ್ಸಾಹ, ಪ್ರತಿಭೆ, ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ. ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿಯೂ ವಿದ್ಯಾಥರ್ಿಗಳು ಮತ್ತು ಸಂಸ್ಥೆಯ ಉನ್ನತ ಸಾಧನೆಯ ಕನಸು ನಮ್ಮದಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಉಪಾಧ್ಯಕ್ಷ ಎಂ.ಪದ್ಮನಾಭ ಪೈ ಮಾತನಾಡಿ ಕರ್ತವ್ಯ,ಶ್ರದ್ಧೆ,ಬದ್ಧತೆ,ಶಿಸ್ತು ಉತ್ತಮ ಆಯ್ಕೆಯ ಮೂಲಕ ಸಂತಸದ ಬದುಕು ನಮ್ಮೆಲ್ಲರದ್ದಾಗಬೇಕು. ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿಯ ಜತೆಗೆ ಶೈಕ್ಷಣಿಕವಾಗಿ ಉತ್ತಮ ಸಂವಹನ,ತರಬೇತಿಗೆ ಆದ್ಯತೆ ನೀಡಬೇಕು. ಶಾಂತಿ, ಪ್ರೀತಿ, ವಿಶ್ವಾಸದ ಕೊರತೆಯ

ನಡುವೆಯೂ ಭರವಸೆಯ ಬದುಕು ನಮ್ಮದಾಗಬೇಕು ಎಂದವರು ಹೇಳಿದರು.

ಆಡಳಿತ ಮಂಡಳಿಯ ಕೋಶಾಧಿಕಾರಿ ವಾಮನ್ ಕಾಮತ್, ಸಹ ಕೋಶಾಧಿಕಾರಿ ಜಗನ್ನಾಥ ಕಾಮತ್, ಜತೆ ಕಾರ್ಯದರ್ಶಿಗಳಾದ ಟಿ. ಗೋಪಾಲಕೃಷ್ಣ ಶೆಣೈ, ಕೆ.ಸುರೇಶ್ ಕಾಮತ್, ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, ಮಂಗಲ್ಪಾಡಿ ನರೇಶ್ ಶೆಣೈ, ಕೆ. ಶಿವಾನಂದ ಶೆಣೈ, ಆಕೃತಿ ಉತ್ಸವದ ಪ್ರಧಾನ ಸಮನ್ವಯಕಾರ ನವೀನ್ಎ.ಕಲಾಲ್ ಉಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ವಾರ್ಷಿಕ ವರದಿ ಮಂಡಿಸಿದರು. ಪ್ಲೇಸ್ಮೆಂಟ್ ಆಫೀಸರ್ ಎಂ. ಪಂಚಮಿ ನಾಯಕ್ ಅತಿಥಿಯನ್ನು ಪರಿಚಯಿಸಿದರು. ಪ್ರತಿಭಾನ್ವಿತರು, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ಲೇಸ್ಮೆಂಟ್ ಆಫೀಸರ್ ಕೀರ್ತನ್ ಕಿಣಿ, ಉಪನ್ಯಾಸಕಿ ಕ್ಯಾರಲ್ ರೋಡ್ರಿಗಸ್ ಸಾಧಕ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಬೇಸಿಕ್ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ಎನ್. ಸತೀಶ್ ಕುಮಾರ್ ಸ್ವಾಗತಿಸಿದರು. ಆಕೃತಿ ಉತ್ಸವದ ಪ್ರಧಾನ ಸಮನ್ವಯಕಾರ ಧನಂಜಯ ಬಿ. ವಂದಿಸಿದರು.

ವಿದ್ಯಾರ್ಥಿಗಳಾದ ಸೌರಭ್ ಹಲಗೇಕರ್ ಮತ್ತು ತಾರಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಆರಂಭದಲ್ಲಿ ವಿದ್ಯಾಥರ್ಿಗಳು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಸ್ವಾಗತ ನೃತ್ಯ ವೈವಿಧ್ಯ ಗಮನಾರ್ಹವಾಗಿತ್ತು.

ಮೂರು ದಿನಗಳ ರಾಜ್ಯ ಮಟ್ಟದ ಆಕೃತಿ ಉತ್ಸವದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯ, ತಾಂತ್ರಿಕ ಹೀಗೆ ಒಟ್ಟು 57 ರಷ್ಟು ಸ್ಪರ್ದಾ ಕಾರ್ಯಕ್ರಮಗಳಿದ್ದು ಹ್ಯಾಕಥಾನ್, ಟೀಮ್ ಆರ್ಡಿಎಕ್ಸ್ ಬಳಗದ ಬೈಕ್ ಸ್ಟಂಟ್, ಮೋಟೋ ಎಕ್ಸಪೋ, ಹೆಸರಾಂತ ಡಿಜೆ, ಬ್ಯಾಂಡ್ಟೀಮ್ಗಳಿಂದ ಮೂರು ದಿನಗಳ ಪ್ರೊನೈಟ್, ಫುಡ್ ಫೆಸ್ಟ್ ಸಂಭ್ರಮದಲ್ಲಿ ರಾಜ್ಯದ ವಿವಿಧ ಕಾಲೇಜುಗಳ ಮೂರು ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ.

Leave a Comment