ಬಂಟ್ವಾಳ :ನಾರಾಯಣ ಗುರು ವೃತ್ತದ ಬಳಿ ಸದಸ್ಯರು ಶ್ರಮಪಟ್ಟು ನಿರ್ಮಿಸಿರುವ ಟೆಂಪೋ ನಿಲ್ದಾಣದಲ್ಲಿ ಅಕ್ರಮವಾಗಿ ಗೂಡಂಗಡಿಯನ್ನು ನಿರ್ಮಿಸಿ ವ್ಯವಹಾರ ನಡೆಸಲಾಗುತ್ತಿದೆ ಹಾಗೂ ಕಲ್ಲಡ್ಕ ಮೆಲ್ಸೇತುವೆಯ ಕೆಳಗೆ ಗೂಡ್ಸ್ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು ಈ ಬಗ್ಗೆ ಶಾಸಕರು ಹಾಗೂ ಸಂಸದರ ಬಳಿ ಮನವಿ ಮಾಡಲು ತಾಲೂಕು ಗೂಡ್ಸ್ ಸಣ್ಣ ಮತ್ತು ದೊಡ್ಡ ಪಿಕಪ್, 407, ಟೆಂಪೋ ರಿಕ್ಷಾ ಚಾಲಕ ಮಾಲಕರ ಸಂಘದ 25ನೇ ವಾರ್ಷಿಕ ಮಹಾಸಭೆಯಲ್ಲಿ ನಿರ್ಧರಿಸಲಾಯಿತು.
ಆಗಸ್ಟ್ 24, 2025 ರಂದು ಬಿ.ಸಿ.ರೋಡ್‌ನ ರಿಕ್ಷಾ ಭವನದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು, ಸಂಘದ ಸದಸ್ಯರು ಕಾನೂನನ್ನು ಪಾಲಿಸಿ ತಮ್ಮ ಕೆಲಸ ನಿರ್ವಹಿಸಬೇಕೆಂದು ಸಲಹೆ ನೀಡಿ, ಸಂಘವನ್ನು ಟ್ರೇಡ್ ಯೂನಿಯನ್ ಆಗಿ ನೋಂದಾಯಿಸಿ, ಸದಸ್ಯರಿಗೆ ಸರ್ಕಾರದ ಸೌಲಭ್ಯಗಳು ಲಭ್ಯವಾಗುವಂತೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ 2025ನೇ ಸಾಲಿನ ಹೊಸ ಪದಾಧಿಕಾರಿಗಳನ್ನು
ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ನಾರಾಯಣ ಹೊಸಮಾರು, ಕಾರ್ಯದರ್ಶಿ ರಾಬರ್ಟ್ ಮೆಲ್ಕಾರ್, ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಅಲ್ಲಿಪಾದೆ, ಕೋಶಾಧಿಕಾರಿ ಲಾತಿಫ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಸದಸ್ಯರಾಗಿದ್ದು ಇತ್ತೀಚೆಗೆ ವಿಧಿವಶರಾದ ಸದಸ್ಯರಿಗೆ ಒಂದು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಅಲ್ಲಿಪಾದೆ ಸದಸ್ಯರು ಮಹಾಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ವಿನಂತಿಸಿ, ರಾಬರ್ಟ್ ಮೆಲ್ಕಾರ್ ಸ್ವಾಗತಿಸಿ, ನಾರಾಯಣ ಹೊಸಮಾರು ವಂದಿಸಿದರು.















