ಬಂಟ್ವಾಳ: ಪ್ರತೀ ವರ್ಷ ಅತಿವೃಷ್ಟಿ ಮತ್ತು ಅನಾವೃಷ್ಟಿ ನೆಪದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜನತೆ ಮಳೆ ನೀರು ತಡೆದು ನಿಲ್ಲಿಸಿ ಭೂಮಿಗೆ ಇಂಗಿಸುವಲ್ಲಿ ಕಾಳಜಿ ವಹಿಸುತ್ತಿಲ್ಲ. ಇದಕ್ಕಾಗಿ ಮಕ್ಕಳಿಗೆ ಬಾಲ್ಯದಿಂದಲೇ ಇಂಗು ಗುಂಡಿ ರಚನೆ ಮತ್ತು ಅದರ ಮಹತ್ವ ಬಗ್ಗೆ ತಿಳಿಸುವ ಮಹತ್ಕಾರ್ಯ ಇಲ್ಲಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯಲ್ಲಿ ನಡೆಯುತ್ತಿದೆ.
ಇಂಗು ಗುಂಡಿ ನಿರ್ಮಿಸುವ ಸ್ಪರ್ಧೆ :
ಶಾಲಾ ಪರಿಸರ ಹಸಿರುಗೊಳಿಸುವ ನಿಟ್ಟಿನಲ್ಲಿ ರಚನೆಗೊಂಡ ಇಲ್ಲಿನ ಪರಿಸರ ಸಂಘದ ವತಿಯಿಂದ ಪ್ರತೀ ವರ್ಷ ವಿದ್ಯಾರ್ಥಿಗಳಿಗೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ 'ಇಂಗು ಗುಂಡಿ ನಿರ್ಮಿಸುವ ಸ್ಪರ್ಧೆ ' ಏರ್ಪಡಿಸಿ ಜನತೆಗೆ ಜಲ ಸಾಕ್ಷರತೆ ಪಾಠ ಕಲಿಸುತ್ತಿದೆ. ಇಲ್ಲಿನ ಬಹುತೇಕ ವಿದ್ಯಾರ್ಥಿನಿಯರು ತಮ್ಮ ಪೋಷಕರು ಮತ್ತು ಸ್ಥಳೀಯರ ಸಹಕಾರದಲ್ಲಿ ಸ್ಥಳೀಯ ಗುಡ್ಡ ಮತ್ತು ಅರಣ್ಯ ಪ್ರದೇಶಗಳಲ್ಲಿ ಹಲವಾರು ಇಂಗು ಗುಂಡಿ
ರಚಿಸಿದ್ದಾರೆ.
ಈ ಪೈಕಿ ರಿಯೋನ ಪಿಂಟೊ, ಸ್ವಾತಿ, ಮಿಶಲ್ ಲೋಬೊ, ಪರಿಣಿತ, ಸಿಂಚನ, ರಶ್ವಿತ, ಸಂಜನಾ ಇವರಿಗೆ ಬಹುಮಾನ ದೊರೆತಿದೆ ಎಂದು ಮುಖ್ಯ ಶಿಕ್ಷಕಿ ಭಗಿನಿ ನವೀನ ತಿಳಿಸಿದರು.
ಇಲ್ಲಿನ 73 ಮಂದಿ ವಿದ್ಯಾರ್ಥಿನಿಯರು ಒಟ್ಟು 190 ಇಂಗು ಗುಂಡಿ ರಚಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಒಟ್ಟು 470 ಇಂಗು ಗುಂಡಿ ನಿರ್ಮಿಸಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ವಿಜ್ಞಾನ ಶಿಕ್ಷಕ ರೋಷನ್ ಪಿಂಟೊ.















