ಬಂಟ್ವಾಳ:ದೇಶದಲ್ಲಿ ಜನತೆಗೆ ಕಾಂಗ್ರೆಸ್ ಪಕ್ಷ ಮಾತ್ರ ಉಚಿತ ನಿವೇಶನ ಸಹಿತ ವಸತಿ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಶಿಕ್ಷಣ, ಸಮವಸ್ತ್ರ, ಅಕ್ಷರ ದಾಸೋಹ ಮತ್ತಿತರ ಸೌಲಭ್ಯ ನೀಡಿದೆ. ರಾಜ್ಯ ಸರ್ಕಾರ ನೀಡಿದ ಗೃಹಲಕ್ಷ್ಮಿ, ಶಕ್ತಿ ಮತ್ತಿತರ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಿಳೆಯರು ಸೇರಿದಂತೆ ಜನಸಾಮಾನ್ಯರ ಮೆಚ್ಚುಗೆ ಗಳಿಸಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಮೆಲ್ಕಾರ್- ಸಜಿಪಮೂಡ ನಡುವೆ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಸಂಜೆ ನಡೆದ ವಾಹನ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ ಗ್ಯಾರಂಟಿ ಟೀಕಿಸಿದ್ದ ಬಿಜೆಪಿ 'ಮೋದಿ ಗ್ಯಾರಂಟಿ' ಎನ್ನುತ್ತಿದೆ ಎಂದು ಲೇವಡಿ ಮಾಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಮಾತ್ರ ಬಿಲ್ಲವ ಅಭ್ಯರ್ಥಿ ಗಳಿಗೆ ಒಟ್ಟು 16 ಬಾರಿ ಸ್ಪರ್ಧಿಸಲು ಅವಕಾಶ ನೀಡಿದೆ. ಈ ಹಿಂದೆ ಕಾಂಗ್ರೆಸ್ ಮಾಡಿದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಧಾನಿ ಮೋದಿ ಗೆ ಪತ್ರ ಬರೆದ ಪರಿಣಾಮ ಎನ್ನುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪತ್ರದ ಸುದ್ದಿಯೇ ಇಲ್ಲ. ಈ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದು ಅಂದಿನ ಭೂಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್ ಎಂಬುದು ಜನತೆಗೆ ತಿಳಿದಿದೆ ಎಂದು ಅವರು ತಿಳಿಸಿದರು.
ಜಿ.ಪಂ.ಮಾಜಿ
ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಮತದಾರರಿಗೆ ಮದ್ಯ, ಬಾಡೂಟ ನೀಡಿ ಗೆಲುವು ಕಂಡ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಜೊತೆಗಿದ್ದು ಬಳಿಕ ಬಿಜೆಪಿ ಗೆ ಸೇರಿ ಪದ್ಮರಾಜ್ ವಿರುದ್ಧ ಟೀಕಿಸುವ ನೈತಿಕತೆ ಹರಿಕೃಷ್ಣ ಬಂಟ್ವಾಳ್ ಅವರಿಗೆ ಇಲ್ಲ ಎಂದರು.ವಕೀಲ ಅಶ್ವನಿ ಕುಮಾರ್ ರೈ, ಪ್ರಚಾರ ಸಮಿತಿ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್ , ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿದರು.
ಪ್ರಮುಖರಾದ ಬಿ. ಪದ್ಮಶೇಖರ್ ಜೈನ್, ಸುದರ್ಶನ್ ಜೈನ್, ಕೆ.ಸಂಜೀವ ಪೂಜಾರಿ, ಅಬ್ಬಾಸ್ ಆಲಿ, ಕೆ.ಪದ್ಮನಾಭ ರೈ, ಜಯಂತಿ ಪೂಜಾರಿ, ಶೋಭಾ ಶೆಟ್ಟಿ, ಜನಾರ್ದನ ಚೆಂಡ್ತಿಮಾರ್,ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಚಿತ್ತರಂಜನ್ ಶೆಟ್ಟಿ, ಚಂದ್ರಶೇಖರ ಪೂಜಾರಿ ಮತ್ತಿತರರು ಇದ್ದರು









