ಬಂಟ್ವಾಳ: ಶ್ರೀರಾಮ ಜಗತ್ತಿನ ಸರ್ವಶ್ರೇಷ್ಠ ವ್ಯಕ್ತಿ. ನಮ್ಮ ದೇಶ, ಸಂಸ್ಕೃತಿ, ಜೀವನ ಮೌಲ್ಯಗಳೆಲ್ಲವೂ ರಾಮನನ್ನು ಬಿಟ್ಟಿಲ್ಲ. ರಾಮನ ಎಲ್ಲಾ ಕಾರ್ಯಗಳಿಗೂ ಶಕ್ತಿ ನೀಡಿದವನು ಹನುಮ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಶ್ರೀರಾಮ ನಾಮ ತಾರಕ ಜಪ ಯಜ್ಞ ಸಮಿತಿ ಫರಂಗಿಪೇಟೆ, ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ಫರಂಗಿಪೇಟೆ ಇದರ ಆಶ್ರಯದಲ್ಲಿ ಶನಿವಾರ ಫರಂಗಿಪೇಟೆಯ ವಿಜಯನಗರದಲ್ಲಿ ನಡೆದ ಶ್ರೀರಾಮ ನಾಮ ತಾರಕ ಜಪಯಜ್ಞದ ಸುಧರ್ಮ ಸಭೆಯಲ್ಲಿ ಮಾತನಾಡಿದರು. ಪ್ರಜಾಸತ್ತಾತ್ಮಕ, ಸಮಾಜವಾದಿ, ಜಾತ್ಯಾತೀತ ದೇಶವೆಂಬ ಕಲ್ಪನೆ ಹುಟ್ಟಿಕೊಂಡದ್ದೇ ರಾಮರಾಜ್ಯದಿಂದ, ರಾಮರಾಜ್ಯದಲ್ಲಿ ಇದೆಲ್ಲವೂ ಇತ್ತು ಎಂದು ತಿಳಿಸಿದರು. ಶ್ರೀರಾಮ ಕೋಮುವಾದಿ ಎನ್ನುವ ಆರೋಪ ಕೆವರಿಂದ ಕೇಳಿ ಬಂದಿದೆ, ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಂಡವನು. ಆದ್ದರಿಂದ ಶ್ರೀ ರಾಮ ಕೋಮುವಾದಿ ಆಗಲು ಸಾಧ್ಯವಿಲ್ಲ. ಶ್ರೀ ರಾಮ ಕೋಮುವಾದಿ ಆಗದಿದ್ದರೆ ಅವನ ಜೊತೆಯಿರುವ ಹಿಂದೂಗಳು ಕೋಮುವಾದಿಗಳಾಗಲು ಸಾಧ್ಯವಿಲ್ಲ. ಸಮಾಜದ ಮೇಲಿನ ಆಕ್ರಮಣವನ್ನು ಹಿಂದೂ ಸಮಾಜ ಒಟ್ಟಾಗಿ ಎದುರಿಸಬೇಕಾಗಿದೆ ಎಂದು ತಿಳಿಸಿದರು.
ಖ್ಯಾತ ಲೇಖಕ ರೋಹಿತ್ ಚಕ್ರತೀರ್ಥ ಶ್ರೀರಾಮ ಪಥ ದರ್ಶನದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಉತ್ತರ ಭಾಗದಲ್ಲಿ ತನ್ನ ದಣಿ ಶ್ರೀರಾಮನಿಗೆ ಸುಂದರವಾದ ದೇವಸ್ಥಾನ ನಿರ್ಮಾಣ ಆಗುತ್ತಿರುವಾಗ ಅವನ ಸೇವಕನಿಗೆ ದಕ್ಷಿಣದಲ್ಲಿ ದೇವಸ್ಥಾನ ಆಗುತ್ತಿರುವುದು ಅಭಿನಂದನೀಯ ಎಂದರು.
ಪುರಾತನ ದೇವಸ್ಥಾನಗಳಿಂದಾಗಿ ನಮ್ಮ ದೇಶದ ಕಲೆ, ವೈಭವ, ಇತಿಹಾಸ ಉಳಿದಿದೆ. ಸಾವಿರಾರು ವರ್ಷಗಳ ಹಿಂದೆ ದೇವಸ್ಥಾನಗಳನ್ನು ನಿರ್ಮಿಸಿದ ಅರಸರು ನಾಶವಾಗಿದ್ದಾರೆ. ಆದರೆ ಅವರು ನಿರ್ಮಿಸಿದ ದೇವಸ್ಥಾನಗಳಿಂದ ಅಂದಿನ ಇತಿಹಾಸ ತಿಳಿದು ಕೊಳ್ಳಲು ಸಾಧ್ಯವಾಗಿದೆ ಎಂದರು. ಶ್ರೀರಾಮನ ತ್ಯಾಗ ಹಾಗೂ
ಕರುಣ ಗುಣ ಎಲ್ಲರಿಗೂ ಆದರ್ಶವಾದುದು, ಇದ್ದಿಲಿನಂತಿದ್ದ ಹನುಮನನ್ನು ವಜ್ರದಂತೆ ಹೊಳಪು ನೀಡಿದ್ದು ಶ್ರೀ ರಾಮ. ಗುಹ, ಶಬರಿ, ಜಟಾಯುವನು ಉದ್ದರಿಸಿದ್ದು ಶ್ರೀ ರಾಮ. ಹೀಗೆ ರಾಮಯಣ ಕಾಲದಲ್ಲಿ ರಾಮನ ಕರುಣಾರಸದಿಂದ ಪ್ರತಿಯೊಬ್ಬರೂ ತೋಯ್ದು ಹೋಗಿದ್ದಾರೆ ಎಂದರು.
ಮಂಗಳೂರು ಎಕ್ಸ್‌ಪರ್ಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ನರೇಂದ್ರ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು, ಅಧ್ಯಕ್ಷ ಅಜಿತ್ ಚೌಟ ದೇವಸ್ಯ, ಕಾರ್ಯಧ್ಯಕ್ಷರಾದ ಮಹಾಬಲ ಕೊಟ್ಟಾರಿ ಮುನ್ನೂರು, ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಸಂಚಾಲಕ ಕೆ.ಜಿ.ವಿಠಲ ಆಳ್ವ, ಶ್ರೀ ಆಂಜನೇಯ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಸ್ಥಳ ದಾನಿ ರವೀಶ್ ತುಂಗ ಮೊದಲಾದವರು ಉಪಸ್ಥಿತರಿದ್ದರು.
ಕಿಶೋರ್ ಪಲ್ಲಿಪ್ಪಾಡಿ ವೈಯಕ್ತಿಕ ಗೀತೆ ಹಾಡಿದರು. ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿ ಅಧ್ಯಕ್ಷ ಅನಿಲ್ ಪಂಡಿತ್ ಸ್ವಾಗತಿಸಿದರು, ಗೌರವ ಸಲಹೆಗಾರ ಟಿ. ತಾರನಾಥ ಕೊಟ್ಟಾರಿ ವಂದಿಸಿದರು, ಸಂಯೋಜಕ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು. ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಶ್ರೀ ರಾಮ ನಾಮ ತಾರಕ ಜಪ ಯಜ್ಞ ನಡೆಯಿತು. ಶಾಸಕರಾದ ರಾಜೇಶ್ ನಾಕ್, ವೈ ಭರತ ಶೆಟ್ಟಿ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀರಾಮ ನಿರ್ಯಾಣ ಯಕ್ಷಗಾನ ತಾಳಮದ್ದಳೆ ನಡೆಯಿತು.














