ಬಂಟ್ವಾಳ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಕೊಡಮಾಡುವ ರಾಜ್ಯ ಮಟ್ಟದ ಪತ್ರಕರ್ತ ಸೌರಭ ಪ್ರಶಸ್ತಿ 2023 ಪ್ರಶಸ್ತಿಗೆ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಆಯ್ಕೆಯಾಗಿರುತ್ತಾರೆಂದು ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಹೂವಿನಹಡಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಯಾನಂದ ಪೆರಾಜೆಯವರು 1986 ರಲ್ಲಿ ಸುದ್ದಿ ಬಿಡುಗಡೆ ವಾರ ಪತ್ರಿಕೆ ಬಂಟ್ವಾಳದಲ್ಲಿ ವರದಿಗಾರರಾಗಿ ಕಾರ್ಯಾರಂಭಿಸಿ ಬಳಿಕ ಹೊಸದಿಗಂತ, ಮುಂಗಾರು, ಸಂಯುಕ್ತಕರ್ನಾಟಕ ಕನ್ನಡ ಪ್ರಭ ದಿನಪತ್ರಿಕೆಗಳಲ್ಲಿ ಸುದೀರ್ಘ ಕಾಲ ಬಂಟ್ವಾಳ ತಾಲೂಕು ವರದಿಗಾರರಾಗಿ ಸೇವೆಸಲ್ಲಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರರಾಗಿ, ಕವಿ, ಸಾಹಿತಿಯಾಗಿ ಲೇಖನಗಳನ್ನು ಪ್ರಕಟಿಸಿರುತ್ತಾರೆ. ಹೊಸದಿಗಂತಪತ್ರಿಕೆಯ ವರದಿಗಾರರಾಗಿ ಇರುವ ಇವರು ಪ್ರಸ್ತುತ ಮಧುಪ್ರಪಂಚ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿರುತ್ತಾರೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಬರಹಗಾರರ ವೇದಿಕೆಯ ಜಿಲ್ಲಾಧ್ಯಕ್ಷರಾಗಿರುತ್ತಾರೆ.
ಬಂಟ್ವಾಳದಲ್ಲಿ ಆರಂಭವಾದ ನಮ್ಮ ಬಂಟ್ವಾಳ ಪತ್ರಿಕೆಯ ಉಪಸಂಪಾದಕರಾಗಿ, ಜನ ಈ ದಿನ, ನೇತ್ರಾವತಿ ವಾರ್ತೆ ಪತ್ರಿಕೆಗಳಲ್ಲಿ ಸಕ್ರಿಯವಾಗಿದ್ದರು. ವಂಶ, ನವ್ಯವಾಣಿ ವಾರಪತ್ರಿಕೆಗಳಲ್ಲಿ ಲೇಖನ ಕವನ ಬರಹಗಳನ್ನು ಪ್ರಕಟಿಸಿ ಕವಿ ಸಾಹಿತಿಯಾಗಿ ಗುರುತಿಸಲ್ಪಟ್ಟಿದ್ದಾರೆ.
ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸುದೀರ್ಘ ಕಾಲ ಜವಾಬ್ದಾರಿ ನಿರ್ವಹಿಸಿದ್ದರು. ದ.ಕ. ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರಾಗಿ ಸಾಹಿತ್ಯ ಚಟುವಟಿಕೆಯಲ್ಲಿ ಹಲವು ಪ್ರತಿಭೆಗಳಿಗೆ ಅವಕಾಶವನ್ನು ಮಾಡಿಕೊಡುತ್ತಿದ್ದಾರೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷರಾಗಿ ಚುಟುಕು ಸಾಹಿತ್ಯ ರಚನೆ ತರಬೇತಿ ಶಿಬಿರಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸಿಕೊಡುತ್ತಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕಿನ ಅಧ್ಯಕ್ಷರಾಗಿದ್ದು ಪ್ರಸ್ತುತ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುತ್ತಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು
ಅಧ್ಯಕ್ಷರಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು, ರಾಜ್ಯ ಅಂತರಾಷ್ಟ್ರೀಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿಯಾಗಿ ಗುರುತಿಸಿಕೊಂಡಿದ್ದಾರೆ.
ಜೆ.ಸಿ.ಐ ಸಂಸ್ಥೆಯ ಉದಕ ಪತ್ರಿಕೆಯ ಸಂಪಾದಕರಾಗಿ, ನೇತ್ರಾವತಿ ಜೋಡುಮಾರ್ಗ , ಸರಯು ಪತ್ರಿಕೆ ಹಾಗೂ ಹಲವು ಸ್ಮರಣ ಸಂಚಿಕೆಗಳಲ್ಲಿ ಸಂಪಾದಕರಾಗಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾವಬಿಂದು ಕವನ ಸಂಕಲನ ಪ್ರಕಟಿಸಿದ್ದಾರೆ.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಜೆಸಿಐ ಜೋಡುಮಾರ್ಗ ನೇತ್ರಾವತಿ ಜ್ಯೂನಿಯರ್ ಚೇಂಬರ್‌ನ ಅಧ್ಯಕ್ಷರಾಗಿದ್ದರು. ಜೆಸಿಐ ರಾಜ್ಯ ತರಬೇತುದಾರರಾಗಿ , ರಾಷ್ಟೀಯ ತೀರ್ಪುಗಾರರಾಗಿದ್ದರು. ಪ್ರಸ್ತುತ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರವಾತಿ ಸಂಗಮದ ಅಧ್ಯಕ್ಷರಾಗಿದ್ದಾರೆ. ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಹಲವು ಸಾಧನಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕನ್ನಡ ರತ್ನ, ಚೈತನ್ಯ ಶ್ರೀ, ಶಿಕ್ಷಕರ ರತ್ನ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪತ್ರಿಕಾ ರಂಗದ ಭೀಷ್ಮ ಮೊದಲಾದ ಗೌರವ ಪ್ರಶಸ್ತಿಗಳು ಇವರಿಗೆ ದೊರಕಿದೆ.
ಪತ್ರಕರ್ತರಾಗಿ ,ಸಾಹಿತಿಯಾಗಿ, ಕವಿಯಾಗಿ ,ನಾಟಕ ನಿರ್ದೇಶಕರಾಗಿ, ಯಕ್ಷಗಾನ ಕಲಾವಿದರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿದ್ದು ಹಲವು ಪುರಸ್ಕಾರಗಳು ಇವರಿಗೆ ಲಭಿಸಿವೆ.
ಫೆ.26ರಂದು ವಿಜಯಪುರದ ಹಂಪಿಯಲ್ಲಿ ನಡೆಯುವ ರಾಜ್ಯ ಸಮ್ಮೇಳನ ಮತ್ತು ಸಾವಿರ ಗೋಷ್ಠಿಯ ಸಂಭ್ರಮ ಕಾಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕದ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕಾರ ನಡೆಯಲಿದೆ.














