ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಏರ್ಯ ಆಳ್ವ ಪೌಂಡೇಶನ್, ಮೊಡಂಕಾಪು ಇವರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಸ್ಮರಣಾರ್ಥ "ವರ್ಣಾoಜಲಿ" 2ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಯನ್ನು ಖ್ಯಾತ ರಂಗಭೂಮಿ ಕಲಾವಿದೆ ಚಲನಚಿತ್ರ ನಟಿ ಸರೋಜಿನಿ ಎಸ್ ಶೆಟ್ಟಿ ಮಂಗಳೂರು ಇವರು ಸೇವಾಂಜಲಿ ಸಭಾ ಭವನದಲ್ಲಿ ಡಿ 22ರಂದು ಆದಿತ್ಯವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿ ಇಂದು ಮಕ್ಕಳಿಗೆ ಸಂಭ್ರಮದ ದಿನ, ಸೇವಾಂಜಲಿಯ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರ ತರುವ ಪ್ತಯತ್ನ ನಡೆಯುತ್ತಿದೆ, ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಮುನ್ನಡೆಯಲು ಪಾಲಕರು ಪ್ರೋತ್ಸಾಹಿಸಬೇಕು, ಪಠ್ಯದೊಂದಿಗೆ ಪಠ್ಯತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಭವಿಷ್ಯದಲ್ಲಿ ಮಕ್ಕಳ ಬಾಳು ಬೆಳಗುತ್ತದೆ ಈ ನಿಟ್ಟಿನಲ್ಲಿ ಸೇವಾಂಜಲಿಯು ಜಾತಿ ಧರ್ಮ ಮತ ಬೇದವಿಲ್ಲದೆ ಸಮಾಜಕ್ಕಾಗಿ ಅದ್ಬುತ ಸೇವೆ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಮುಕ್ಯೋಪಾಧ್ಯಾಯರಾದ ಮಹಾಬಾಲೇಶ್ವರ ಹೆಬ್ಬಾರ್ ಮಾತನಾಡಿ ನಮ್ಮಲ್ಲಿ ಕಲಿಕೆ ಗ್ರಹಿಕೆಗೆ ಸೀಮಿತವಾಗಬಾರದು ನಮ್ಮಲ್ಲಿ ರೋಚಕವಾದ ಕಲ್ಪನಾ
ಶಕ್ತಿ ಇದೆ ಚಿತ್ರಕಲೆಯ ಮೂಲಕ ಅದನ್ನು ಸದುಪಯೋಗ ಪಡಿಸೋಣ, ಸೃಜನಶೀಲಾ ಕಳೆಯು ನಮ್ಮ ಕಲಿಕೆಗೆ ಇನ್ನಷ್ಟು ಪ್ರೇರಣೆ ಕೊಡುತ್ತದೆ, ಸೇವಾಂಜಲಿಯ ಮೂಲಕ ಪುಸ್ತಕ ಪ್ರೇಮಿ ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಸ್ಮರಣಾರ್ಥ ನಡೆಯುವ ಈ ಸ್ಪರ್ಧೆಯಲ್ಲಿ ಮಕ್ಕಳು ತೊಡಗಿಸಿಕೊಂಡು ಮುಂದೆ ಉತ್ತಮ ಹೆಸರನ್ನು ಪಡೆಯಲಿ ಎಂದು ಶುಭ ಹಾರೈಸಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ವೃತ್ತಿ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ದೇವದಾಸ ಅರ್ಕುಳ ಧನ್ಯವಾದವಿತ್ತರು, ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಮಂಚಿ ಕಾರ್ಯಕ್ರಮ ನಿರೂಪಿಸಿದರು.















