ಬಂಟ್ವಾಳ: ನವಂಬರ್ 20ರಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಬೃಹತ್ ಪ್ರತಿಭಟನೆಯು ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಯಿತು.
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರಕಾರ ನಿರಂತರವಾಗಿ ಹಿಂದೂ ದಮನ ನೀತಿಯನ್ನು ಅನುಸರಿಸುತ್ತಿದ್ದು ಇತ್ತೀಚೆಗೆ ಪುತ್ತೂರು, ಸುಳ್ಯಗಳಲ್ಲಿ ಭಜರಂಗದಳದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಲಾಗಿದೆ. ಅಪ್ರಾಪ್ತ ಹಿಂದೂ ಹುಡುಗಿಯನ್ನು ಅನ್ಯಮತೀಯರು ವಂಚನೆ ಮಾಡಿ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಪೋಲೀಸರಿಗೆ ಮಾಹಿತಿ ನೀಡಿ ಹುಡುಗಿಯನ್ನು ರಕ್ಷಣೆ ಮಾಡಿದ್ದ ಹುಡುಗರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದ್ದು, ಇದನ್ನೇ ಮುಂದಿಟ್ಟುಕೊಂಡು ಹಿಂದೂ ಕಾರ್ಯಕರ್ತರಲ್ಲಿ ಗಡಿಪಾರು ಮಾಡುವ
ನೋಟೀಸನ್ನು ನೀಡಿ ಹಿಂದೂ ಕೆಲಸವನ್ನು ದಮನ ಮಾಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಮಂಗಳೂರು ವಿಭಾಗದ ವಿಶ್ವಹಿಂದೂ ಪರಿಷತ್‌ನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು.
ಇದಲ್ಲದೇ ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಪಿ ಇವರು ಪೋಲೀಸರ ಮೂಲಕ ಸರಕಾರ ಮಾಡುತ್ತಿರುವ ಹಿಂದೂ ವಿರೋಧಿ ಕೃತ್ಯವನ್ನು ಖಂಡಿಸಿ, ತಕ್ಷಣ ಗಡಿಪಾರು ನೋಟೀಸನ್ನು ಹಿಂದಕ್ಕೆ ಪಡೆಯಬೇಕೆಂದು ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.














