ಬಂಟ್ವಾಳ: ಆ.20: ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಒದಗಿಸುವ ಧ್ವನಿವರ್ಧಕವನ್ನು ಪೊಲೀಸರು ಒಂದು ವಾರದಿಂದ ಅಲ್ಲಲ್ಲಿ ಮುಟ್ಟುಗೋಲು ಹಾಕಿ ಕೊಳ್ಳುತ್ತಿದ್ದಾರೆ, ಧ್ವನಿವರ್ಧಕ ವ್ಯವಸ್ಥೆಯನ್ನು ತಡೆಹಿಡಿಯುತ್ತಿರುವುದರಿಂದ ಸಮಸ್ಯೆಯಾಗಿದೆ. ಆದ್ದರಿಂದ ಆ. 21ರಿಂದಲೇ ನಾವು ಯಾವುದೇ ಕಾರ್ಯಕ್ರಮಗಳಿಗೆ ಅನ್ವಯವಾಗುವಂತೆ ಈ ಸಮಸ್ಯೆ ಇತ್ಯರ್ಥಪಡಿಸುವವರೆಗೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಹಾಗೂ ಜನರೇಟರ್ಗಳನ್ನು ನೀಡದಿರಲು ನಿರ್ಧರಿಸಿದ್ದೇವೆ ಎಂದು ಎಂದು ದ.ಕ. ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘದ ಅಧ್ಯಕ್ಷ ಧನರಾಜ್ ಶೆಟ್ಟಿ ತಿಳಿಸಿದ್ದಾರೆ.
ಅವರು ಬುಧವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಲೀಸರಲ್ಲೇ ಬೇಸ್ ಸ್ಪೀಕರ್ ಹಾಗೂ ಡಿಜೆ ಬಗ್ಗೆ ಗೊಂದಲಗಳಿವೆ, ಅಸ್ಪಷ್ಟತೆ ಇದೆ, ಇದರಿಂದಾಗಿ ಕಾರ್ಯಕ್ರಮ ಆಯೋಜಕರು, ಕಲಾವಿದರು ಹಾಗೂ ಸಂಘದ ಸದಸ್ಯರಿಗೆ ಹಾಗೂ ಕಾರ್ಮಿಕರಿಗೆ ಸಮಸ್ಯೆಯಾಗಿದೆ ಎಂದರು.
ನಾವು ಡಿಜೆ ಬಳಸುವ ಕುರಿತಂತೆ ಸರಕಾರದ ಕಾನೂನನ್ನು ಗೌರವಿಸುತ್ತೇವೆ, ಆದರೆ ತೆರೆದ ಪ್ರದೇಶಗಳಲ್ಲಿ ಶಾಮಿಯಾನ ಹಾಕಿ ಕಾರ್ಯಕ್ರಮ ನಡೆಸುವ ಸಾರ್ವಜನಿಕ ಸಮಾರಂಭಗಳಲ್ಲಿ ಕೇವಲ 50 ಡೆಸಿಬಲ್ ಸೀಮಿತಗೊಳಿಸಬೇಕು ಎನ್ನುವ ಆದೇಶ ಸರಿಯಾದುದ್ದಲ್ಲ. ಇದರಿಂದ ಜನರಿಗೆ ಯಾವುದೇ ಕಾರ್ಯಕ್ರಮದ
ಧ್ವನಿ ಕೇಳಿಸಲಾರದು ಎಂದರು.
ಅಷ್ಟಮಿ ದಿನದಂದು ಹಲವೆಡೆ ಪೊಲೀಸರು ಧ್ವನಿವರ್ಧಕಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇದಕ್ಕೆ ಸರಕಾರ ಒಂದು ಪರಿಹಾರವನ್ನು ಕಂಡುಕೊಳ್ಳ ಬೇಕು. ನಮಗೆ ವ್ಯಾಪಾರ ಇರುವುದೇ ಮಳೆಗಾಲದ ಅನಂತರದ ಹಬ್ಬದ ಸಂದರ್ಭದಲ್ಲಿ ಅದಕ್ಕೂ ಈ ರೀತಿ ಅಡ್ಡಿ ಉಂಟು ಮಾಡಿದರೆ ನಷ್ಟವಾಗುತ್ತದೆ ಎಂದು ಸ್ಥಾಪಕಾಧ್ಯಕ್ಷ ಅಶೋಕ್ ಕುಮಾರ್ ಬಿ. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರ್, ಮಹೇಶ್ . ಬೋಳಾರ್ ಎಲ್.ಎಂ, ಸುದರ್ಶನ್, ದೇವರಾಜ್, ನಿಶಿತ್ ಪೂಜಾರಿ, ಬಾಬು ಕೆ.ವಿಟ್ಲ ಉಪಸ್ಥಿತರಿದ್ದರು.















