ಮಂಗಳೂರು : ನಗರದ ವಿವಿಧ ಹೊಟೇಲ್ ಗಳಲ್ಲಿ ಉಳಿದುಕೊಂಡು ಬಿಲ್ ಪಾವತಿಸದೆ ಪರಾರಿಯಾಗುತ್ತಿದ್ದ ನಕಲಿ ಪ್ರೊಫೆಸರ್ ನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.ಶ್ರೀನಿವಾಸ್ ಬಂಧಿತ ಆರೋಪಿಯಾಗಿದ್ದಾನೆ.
ಈತ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ವೈದ್ಯ ಅಂತ ಹೇಳಿಕೊಂಡು , ಪ್ರೊಫೆಸರ್ ಮತ್ತು ಸರ್ಜನ್ ಆಗಿರುವ ಐಡಿ ತೋರಿಸಿ ನಗರದ ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಹೊಟೇಲ್ ಸಿಟಿ ವಾಕ್ ರೆಸಿಡೆನ್ಸಿಯಲ್ಲಿ ರೂಮ್ ಪಡೆದು ಕೊನೆಗೆ ಚೆಕ್ ಔಟ್ ವೇಳೆ, ಹಣ ಕೊಡದೆ ಪರಾರಿಯಾಗಿದ್ದ. ಹೊಟೇಲ್ ರೂಮ್ ಬಾಡಿಗೆ ನಾಲ್ಕು ಸಾವಿರ ರೂಪಾಯಿ ಆಗಬೇಕಿತ್ತು. ಈ ಬಗ್ಗೆ ಹೊಟೇಲಿನ ಮಾಲಕ ಅಬ್ರಾರ್ ಬಂದರು ಪೊಲೀಸರಿಗೆ ದೂರು ನೀಡಿದ್ದರು. ಆನಂತರ ಆತ ನೀಡಿದ್ದ
ಐಡಿ ಕಾರ್ಡನ್ನು ಹೊಟೇಲ್ ಅಸೋಸಿಯೇಶನ್ ಗ್ರೂಪಲ್ಲಿ ಷೇರ್ ಮಾಡಿದ್ದರು.
ಅದೇ ವ್ಯಕ್ತಿ ನವಭಾರತ ವೃತ್ತದಲ್ಲಿರುವ ಪ್ಯಾಪಿಲಾನ್ ಪ್ಯಾಲೇಸ್ ಎನ್ನುವ ಹೊಟೇಲಿನಲ್ಲಿಯೂ ಇದೇ ರೀತಿ ಮೋಸ ಮಾಡಿದ್ದು ತಿಳಿದುಬಂದಿದೆ.
ಬಂದರು ಠಾಣೆ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನಲ್ಲಿರುವುದು ಫೇಕ್ ಐಡಿಯೆಂದು ಗೊತ್ತಾಗಿದೆ. ಅಲ್ಲದೆ, ಈ ಹಿಂದೆ ಇದೇ ವ್ಯಕ್ತಿ ತಮಿಳುನಾಡಿನ ಸೇಲಂನಲ್ಲಿ ನಲಂದಾ ಎನ್ನುವ ಹೊಟೇಲ್ ನಲ್ಲಿ ಉಳಿದುಕೊಂಡು 15 ಸಾವಿರ ರೂ. ಮೋಸ ಮಾಡಿದ್ದ ಎನ್ನುವುದು ವಿಚಾರಣೆ ಸಂದರ್ಭ ತಿಳಿದುಬಂದಿದೆ.














