ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪದ ದೇರಾಜೆಯಲ್ಲಿ ತಲವಾರು ದಾಳಿ ನಡೆದಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಲ್ಲಿ ನಿಜವಾಗಿ ಬೈಕಿನಲ್ಲಿ ತೆರಳುತ್ತಿದ್ದ ಸವಾರರನ್ನು ಓರ್ವ ವ್ಯಕ್ತಿ ಓಡಿಸಿಕೊಂಡು ಹೋದ ಘಟನೆ ಜೂ 20ರಂದು ಶುಕ್ರವಾರ ರಾತ್ರಿ 10ರ ಸುಮಾರಿಗೆ ನಡೆದಿದೆ ಪೊಲೀಸರು ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡು ಗ್ರಾಮದ ದೇರಾಜೆ ಎಂಬಲ್ಲಿ ಯುವಕರಿಬ್ಬರ ಮೇಲೆ ತಲವಾರು ದಾಳಿಗೆ ಯತ್ನ ಎಂಬ ರೀತಿಯಲ್ಲಿ ಶುಕ್ರವಾರ ರಾತ್ರಿ ಸುಮಾರು 11 ಗಂಟೆ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ವೈರಲ್ ಆಗಿದ್ದು, ತಕ್ಷಣ ಎಲರ್ಟ್ ಆದ ಪೊಲೀಸರು ಸ್ಥಳಕ್ಕಾಗಮಿಸಿ ನೆರೆದಿದ್ದ ಜನರನ್ನು ಚದುರಿಸಿ ತನಿಖೆ ಕೈಗೊಂಡಿದ್ದಾರೆ.
ಘಟನೆಯ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣದ ಬಗ್ಗೆ ಸಂಬಂಧಪಟ್ಟ ಯುವಕನಿಂದ ಹೇಳಿಕೆ ಪಡೆದುಕೊಂಡಿದ್ದು, ದೂರುದಾರ ಯುವಕ ಮೊಹಮ್ಮದ್ ಮುಕ್ಬುಲ್ (34) ಎಂಬವರು ಶುಕ್ರವಾರ ರಾತ್ರಿ ಸುಮಾರು 10 ಗಂಟೆ ಸಮಯ ಸಂಬಂಧಿಯೊಬ್ಬರ ಸ್ಕೂಟರಿನಲ್ಲಿ ಸಹ ಪ್ರಯಾಣಿಕರಾಗಿ ಕುಳಿತು ಬೊಳ್ಯಾರ್ ಕಡೆಯಿಂದ ಮೆಲ್ಕಾರ್ ಕಡೆಗೆ ಬರುತ್ತಿದ್ದ ವೇಳೆ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ, ಅಲ್ಲಿ ಬೊಳ್ಯಾರ್ ಕಡೆಗೆ ಮುಖಮಾಡಿ ನಿಲ್ಲಿಸಿದ್ದ ಸ್ಕೂಟರಿನಲ್ಲಿ ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿ ಕುಳಿತಿದ್ದು, ಅವರ ಪೈಕಿ ಓರ್ವ ವ್ಯಕ್ತಿ ದೂರುದಾರರು ತೆರಳುತ್ತಿದ್ದ ಸ್ಕೂಟರ್ ಕಡೆಗೆ ಓಡಿ ಬಂದಿರುತ್ತಾನೆ. ಆ ವೇಳೆ ಆತನ ಕೈಯಲ್ಲಿ ತಲವಾರು ಅಥವಾ ಯಾವುದೇ ಮಾರಕಾಯುಧವನ್ನು ತಾನು ನೋಡಿರುವುದಿಲ್ಲ. ಸದ್ರಿ ವ್ಯಕ್ತಿ
ಓಡಿ ಬರುತ್ತಿರುವುದನ್ನು ಗಮನಿಸಿದ ದೂರುದಾರರು ಸ್ಕೂಟರ್ ಚಾಲನೆ ಮಾಡುತ್ತಿದ್ದ ತನ್ನ ಸಂಬಂಧಿಕನಲ್ಲಿ ವೇಗವಾಗಿ ಹೋಗುವಂತೆ ತಿಳಿಸಿದ್ದು, ಆ ಬಳಿಕ ಹಿಂತಿರುಗಿ ನೋಡದೇ ನಂದಾವರದ ಮನೆಗೆ ತೆರಳಿ ತನ್ನ ತಂದೆಗೆ ಘಟನೆಯ ಬಗ್ಗೆ ತಿಳಿಸಿರುತ್ತಾರೆ. ವಾಟ್ಸಾಪ್ ಗಳಲ್ಲಿ ಪ್ರಸಾರವಾಗುತ್ತಿರುವ ತಲವಾರು ದಾಳಿ ಎಂಬ ಸುಳ್ಳು ಸುದ್ದಿಗಳಿಗೂ ತನಗೂ ಯಾವುದೇ ಸಂಬಂಧ ಇರುವುದಿಲ್ಲ ಹಾಗೂ ತಾನು ಸ್ಥಳದಲ್ಲಿ ಜನರನ್ನು ಜಮಾವಣೆಗೊಳಿಸಿರುವುದಿಲ್ಲ ಎಂಬುದಾಗಿ ದೂರುದಾರ ಮಕ್ಬೂಲ್ ಅವರು ವಿಚಾರಣೆಯ ವೇಳೆ ತಿಳಿಸಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಬೂಲ್ ಅವರ ದೂರಿನ ಮೇರೆಗೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2025, ಸೆಕ್ಷನ್ 125 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಿಸಲಾಗುತ್ತಿದ್ದು, ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್ಸೈ ಭೇಟಿ ನೀಡಿದ್ದಾರೆ ಕಳೆದ ವಾರದಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಹಾಗೂ ಬಕ್ರೀದ್ ಸಮಯದಲ್ಲಿ ಹಸುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೂ ಯಾವ ರೀತಿ ಸಂಬಂಧ ಇದೆ ಎಂಬ ಆಯಾಮದಲ್ಲೂ ಪೊಲೀಸರು ಪರಿಶೀಲನೆ ನಡೆಸಲಾಗುತ್ತಿದ್ದು, ತನಿಖೆ ಕೈಗೊಂಡಿದ್ದಾರೆ.















