Coastal Bulletin

ಮಂಗಳೂರು: ಗೋಲ್ಡ್‌ಫಿಂಚ್‌ ಮೈದಾನದಲ್ಲಿ ನಡೆಯುವ ಪ್ರಧಾನಿಯವರ ಸಮಾವೇಶಕ್ಕೆ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸುಮಾರು 1.5 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ. ಪ್ರಧಾನಿಯವರ ಭಾಷಣ ಆಲಿಸಲು ಅನುಕೂಲವಾಗುವಂತೆ 10ಕ್ಕೂ ಹೆಚ್ಚು ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಸಮಾವೇಶದಲ್ಲಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡುವರು. ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ ಅವರು ಸ್ವಾಗತಿಸುವರು. ಶಿಷ್ಟಾಚಾರದಂತೆ ಪ್ರಧಾನಿಯವರು ಭಾಗವಹಿಸುವ ವೇದಿಕೆಯಲ್ಲಿ 10 ಮಂದಿಗೆ ಮಾತ್ರ ಅವಕಾಶ. ರಾಜ್ಯಪಾಲರು, ಮೂವರು ಕೇಂದ್ರ ಸಚಿವರು, ಮುಖ್ಯಮಂತ್ರಿ, ಮೂವರು ರಾಜ್ಯ ಸಚಿವರು, ಸಂಸದರು ಇರುತ್ತಾರೆ. ಸರಕಾರಿ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರನ್ನು ವೇದಿಕೆಯಲ್ಲಿ ಅವಕಾಶ ಕಲ್ಪಿಸಲು ಪ್ರಧಾನಿಯವರ ಕಾರ್ಯಾಲಯದಿಂದ ಅನುಮೋದನೆ ಕೋರಲಾಗಿದೆ.

ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಧಾನಿಯವರಿಗೆ ಗರಿಷ್ಠ ಭದ್ರತೆ ಒದಗಿಸಲು ಹೊಸದಿಲ್ಲಿಯಿಂದ ಆಗಮಿಸಿರುವ ಎಸ್‌ ಪಿಜಿ ತಂಡ (ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌) ಮೈದಾನದಲ್ಲಿ ಬೀಡು ಬಿಟ್ಟಿದ್ದು ಭದ್ರತಾ ವ್ಯವಸ್ಥೆ ಕುರಿತು ನಿಗಾ ವಹಿಸಿದೆ.

ಕೆಎಸ್‌ಆರ್‌ಪಿ, ಎಎನ್‌ಎಫ್‌, ಸಿಎಆರ್‌, ಗಡಿಭದ್ರತಾ ಪಡೆ, ಡಿಎಆರ್‌, ಆರ್‌ಎಎಫ್‌, ಐಎಸ್‌ಜಿ, ಗರುಡ ಪಡೆ ಸೇರಿದಂತೆ ಮೂರು ಸಾವಿರ ಪೊಲೀಸ್‌ ಸಿಬಂದಿಯನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ. ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ) ಅಲೋಕ್‌ ಕುಮಾರ್‌ ಅವರು ಗುರುವಾರ ನಗರಕ್ಕೆ ಆಗಮಿಸಿದ್ದು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಮೈದಾನದ ಸುತ್ತ 1.ಕಿ.ಮೀ. ವ್ಯಾಪ್ತಿಯಲ್ಲಿ 13 ರಕ್ಷಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಫಲಾನುಭವಿಗಳನ್ನು ಕರೆತರಲು ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಸುಮಾರು 1,000 ಬಸ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಜತೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಆಗಮಿಸುವ ಸಾಧ್ಯತೆಯಿದ್ದು, ಅವರನ್ನು ಕರೆತರಲು 3,000 ಕ್ಕೂ ಹೆಚ್ಚು ಬಸ್‌ಗಳನ್ನು ಒದಗಿಸಲಾಗುತ್ತಿದೆ. ಇದರಿಂದಾಗಿ ಬಸ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು ಹಾಸನ, ಶಿರಸಿ, ಚಿಕ್ಕಮಗಳೂರು, ಶಿವಮೊಗ್ಗ ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಖಾಸಗಿ ಸಂಸ್ಥೆಗಳಿಂದ ಬಸ್‌ಗಳನ್ನು ತರಿಸಲಾಗುತ್ತಿದೆ. ಸಮಾವೇಶದಲ್ಲಿ ಭಾಗವಹಿಸುತ್ತಿರುವ ಪ್ರಮುಖರ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

ರಾಜ್ಯದಲ್ಲೇ ಮೊದಲ ಸಮುದ್ರ ನೀರು ಸಂಸ್ಕರಣ ಸ್ಥಾವರ, ನವ ಮಂಗಳೂರು ಬಂದರಿನಲ್ಲಿ 14ನೇ

ಜೆಟ್ಟಿಯ ಯಾಂತ್ರೀಕರಣ ಸೇರಿದಂತೆ ಹಲವು ಪ್ರಮುಖ ಯೋಜನೆ ಗಳ ಲೋಕಾರ್ಪಣೆ ಮತ್ತು ಇತರ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಸೇರಿ ದಂತೆ ಎಂಆರ್‌ಪಿಎಲ್‌ ಹಾಗೂ ನವಮಂಗಳೂರು ಬಂದರು ಪ್ರಾಧಿಕಾರ ವ್ಯಾಪ್ತಿಯ ಒಟ್ಟು ಸುಮಾರು 3,800 ಕೋ.ರೂ. ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.

ಲೋಕಾರ್ಪಣೆಗೊಳ್ಳಲಿರುವ ಯೋಜನೆ :

-ಎನ್‌ಎಂಪಿಎಯಲ್ಲಿ ಕಂಟೈನರ್‌ಗಳು ಹಾಗೂ ಇತರ ಸರಕು ನಿರ್ವಹಣೆಗೆ ಬರ್ತ್‌ ಸಂಖ್ಯೆ 14ರ ಯಾಂತ್ರೀಕರಣ. 2,200 ಜನರಿಗೆ ಉದ್ಯೋಗ ದೊರೆಯಲಿದೆ. 281 ಕೋ.ರೂಗಳ ಯೋಜನೆ ಇದು. 6.02 ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯ ಹೊಂದಲಿದೆ.

-ಎಂಆರ್‌ಪಿಎಲ್‌ನಲ್ಲಿ ಬಿಎಸ್‌ 6 ಉನ್ನತೀಕರಣ ಯೋಜನೆ. 1,829 ಕೋ.ರೂ ವೆಚ್ಚ. ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣ ಇದರ ಉದ್ದೇಶ.

 -ಎಂಆರ್‌ಪಿಎಲ್‌ನ ಉಪ್ಪುನೀರಿನ ಸಂಸ್ಕ ರಣ ಘಟಕ ತಣ್ಣೀರುಬಾವಿಯಲ್ಲಿ 677ಕೋ.ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ. ಎಂಆರ್‌ಪಿಎಲ್‌ಗೆ ಪ್ರತಿದಿನ 30 ಎಂಎಲ್‌ಡಿ ನೀರು ದೊರೆಯಲಿದೆ. ಈ ಮೂಲಕ ಶುದ್ಧ ನೀರಿನ ಸಂರಕ್ಷಣೆ ಸಾಧ್ಯ.

ಶಿಲಾನ್ಯಾಸಗೊಳ್ಳಲಿರುವ ಯೋಜನೆ :

-ಎನ್‌ಎಂಪಿಎಯಲ್ಲಿ ಶೇಖರಣ ಟ್ಯಾಂಕ್‌ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ. 100 ಕೋ.ರೂ ವೆಚ್ಚದ ಈ ಯೋಜನೆಯಿಂದ 700 ಜನರಿಗೆ ಉದ್ಯೋಗ ದೊರೆಯಲಿದೆ. ಖಾದ್ಯ ತೈಲದ ಆಮದು ವೆಚ್ಚ ಇಳಿಕೆಯಾಗಲಿದೆ.

- 100 ಕೋ.ರೂ ವೆಚ್ಚದಲ್ಲಿ ಎನ್‌ಎಂಪಿಎ ಯಲ್ಲಿ ಬಿಟುಮೆನ್‌ ಶೇಖರಣ ಘಟಕ ನಿರ್ಮಾಣ. ಬಿಟುಮೆನ್‌ ಸಾಗಣೆಯಲ್ಲಿ ಸುಧಾ ರಣೆ ಆಗಿ ಒಟ್ಟು ದರದಲ್ಲಿ ಇಳಿಕೆ ಯಾಗಲಿದೆ. 275 ಮಂದಿಗೆ ಉದ್ಯೋಗಾವ ಕಾಶ ದೊರೆಯಲಿದೆ.

ಎನ್‌ಎಂಪಿಎಯಲ್ಲಿ 100 ಕೋ.ರೂ ವೆಚ್ಚದಲ್ಲಿ ಬಿಟುಮೆನ್‌, ಖಾದ್ಯ ತೈಲ ಶೇಖರಣ ಟ್ಯಾಂಕ್‌ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ. ದರ-ಸಾಮರ್ಥ್ಯ ಸುಧಾರಣೆ ಆಗಲಿದೆ. 275 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.

ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ 196.51 ಕೋ.ರೂ ವೆಚ್ಚದಲ್ಲಿ ಬಂದರು ಅಭಿವೃದ್ಧಿ. 8,500 ಜನರಿಗೆ ಉದ್ಯೋಗ ದೊರೆಯಲಿದೆ. ಕರಾವಳಿ ಮೀನುಗಾರಿಕಾ ಸಮುದಾಯದವರಿಗೆ 192 ಕೋ.ರೂ ವಾರ್ಷಿಕ ಆದಾಯ ನಿರೀಕ್ಷಿಸಲಾಗಿದೆ.

Leave a Comment