ಬಂಟ್ವಾಳ: ತೆಂಕುತಿಟ್ಟು ಯಕ್ಷರಂಗದ ಖ್ಯಾತ ಬಣ್ಣದ ವೇಷಧಾರಿ ಹನುಮಗಿರಿ ಮೇಳದ ಹಿರಿಯ ಕಲಾವಿದ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ (60)ಅವರು ಅಸೌಖ್ಯದಿಂದ ಜು 20ರಂದು ರವಿವಾರ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ತಾಲೂಕಿನ ಸಂಗಬೆಟ್ಟು ಗ್ರಾಮದ ಮಂಚಕಲ್ಲು ನಿವಾಸಿಯಾಗಿರುವ ಮೃತರು ಮೂರು ದಶಕಗಳಿಗೂ ಹೆಚ್ಚಿನ ಕಾಲ ತಿರುಗಾಟ ಮಾಡಿದವರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಯಕ್ಷಗಾನ ಗುರುಗಳಾದ ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಹಾಲಿಂಗ ಅವರಿಂದ ನಾಟ್ಯಾಭ್ಯಾಸ ಕಲಿತು ಸುಮಾರು 36 ವರ್ಷಗಳ ಕಟೀಲು, ಧರ್ಮಸ್ಥಳ, ಹೊಸನಗರ, ಎಡನೀರು, ಹನುಮಗಿರಿ ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.
ಕಳೆದ ಕೆಲವು ತಿಂಗಳ ಹಿಂದಷ್ಟೇ ಹನುಮಗಿರಿ ಮೇಳದಲ್ಲಿ ತಿರುಗಾಟ ಮುಗಿಸಿದ ಅವರು ನಿವೃತ್ತಿಯನ್ನೂ ಘೋಷಣೆ ಮಾಡಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಯಕ್ಷಮಂಗಳ ಪ್ರಶಸ್ತಿ, ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಅರಸಂಕಲ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದರು.













