ಬಂಟ್ವಾಳ :ಮೇ 24, ಗ್ಯಾರೇಜ್ ಮಾಲಕರ ಸಂಘದ ರಜತ ಸಂಭ್ರಮ ಸಮಾರಂಭ. ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ,ಮಹಾಸಭೆ, ಪದಗ್ರಹಣ

Coastal Bulletin
ಬಂಟ್ವಾಳ :ಮೇ 24, ಗ್ಯಾರೇಜ್ ಮಾಲಕರ ಸಂಘದ ರಜತ ಸಂಭ್ರಮ ಸಮಾರಂಭ. ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ,ಮಹಾಸಭೆ, ಪದಗ್ರಹಣ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಇದರ ಬಂಟ್ವಾಳ ವಲಯದ ರಜತ ಸಂಭ್ರಮ ಹಾಗೂ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾಕಲಾಮಂದಿರದಲ್ಲಿ ಮೇ.24ರಂದು ಭಾನುವಾರ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಸುಧಾಕರ್ ಸಾಲ್ಯಾನ್ ತಿಳಿಸಿದರು.

ಅವರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 9.30ಕ್ಕೆ ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಉದ್ಯಮಿ ಶಶಿಧರ ಪೈ, ಕಾರ್ಮಿಕ ನಿರೀಕ್ಷಕಿ ಲವೀನಾ ಡಿಸೋಜಾ, ಉದ್ಯಮಿಗಳಾದ ರಾಜೇಶ್ ಮೆಂಡನ್, ಯೋಗೀಶ್, ಸಂಘದ ಜಿಲ್ಲಾಧ್ಯಕ್ಷ ದಿನಕರ ಕುಲಾಲ್, ದ.ಕ. ಗ್ಯಾರೇಜು ಮಾಲಕರ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ, ಜಿಲ್ಲಾ ಸಂಘದ ನಿರ್ದೇಶಕ ಜೆ.‌ಪುಂಡಲೀಕ ಸುವರ್ಣ ಭಾಗವಹಿಸುವರು. ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಮೆಕ್ಯಾನಿಕ್ ಸದಸ್ಯರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಗುವುದು. 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯೂಸಿಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಹಾಗೂ ಗ್ಯಾರೇಜ್ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಸಂಜೆ 6 ಗಂಟೆಗೆ ನಿಯೋಜಿತ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ವಿಧಾನಸಭಾದ್ಯಕ್ಷ ಯು.ಟಿ. ಖಾದರ್, ಸಂಸದ ಕ್ಯಾ. ಬೃಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವ ರಮಾನಾಥ

ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ ಮಾತನಾಡಿ 25 ವರ್ಷಗಳ ಹಿಂದೆ ಆರಂಭವಾದ ಸಂಘ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. 2011 ರಲ್ಲಿ ಇದ್ದ ಅಜೀವ ಸದಸ್ಯರ‌ ಸಂಖ್ಯೆ 160 ಕ್ಕೇರಿದೆ. ಕಳೆದ 15 ವರ್ಷಗಳಿಂದ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ವನಮಹೋತ್ಸವ ಕಾರ್ಯಕ್ರಮ, ಆಟಿದ ಕೂಟ, ಸದಸ್ಯರಿಗೆ ಮನೋರಂಜನಾ ಪ್ರವಾಸ ಹಮ್ಮಿಕೊಂಡಿದ್ದು ಪ್ರತೀ ವರ್ಷ ಸದಸ್ಯರ ಹಾಗೂ ಇತರರ ಮನವಿಯ ಮೇರೆಗೆ 2 ಲಕ್ಷ ರೂಪಾಯಿ ಧನ ಸಹಾಯ , ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ನೀಡಿ ಗೌರವಿಸಲಾಗಿದೆ ಎಂದರು. ಈಗಾಗಲೇ 30 ಲಕ್ಷ ವೆಚ್ಚದಲ್ಲಿ ಜಾಗ ಖರೀಧಿಸಿದ್ದು ಮುಂದಿನ ಎರಡು ವರ್ಷಗಳಲ್ಲಿ ಸಂಘದ ಸಮುದಾಯ ಭವನವನ್ನು ನಿರ್ಮಿಸಿ ಬಡವರಿಗೆ ಅತೀ ಕಡಿಮೆ ದರದಲ್ಲಿ ಸಭೆ ಸಮಾರಂಭಗಳಿಗೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ರಾಜೇಶ್ ಕುಲಾಲ್, ಸಂಚಾಲಕ ಗಣೇಶ್ ಸುವರ್ಣ, ಗೌರವ ಸಲಹೆಗಾರ ವಿಶ್ವನಾಥ ಬಿ. ಕೋಶಾಧಿಕಾರಿ ಭಾಸ್ಕರ ಕುಲಾಲ್, ನಿಕಟಪೂರ್ವಾಧ್ಯಕ್ಷ ಜಗದೀಶ್ ರೈ ಉಪಸ್ಥಿತರಿದ್ದರು.


Leave a Comment