Coastal Bulletin

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ಯುವಕನಿಗೆ ಮಂಕಿಪಾಕ್ಸ್ ದೃಢಪಟ್ಟಿದೆ.

ಈಗ ಇಲ್ಲಿಯೂ ಸೋಂಕು ಹರಡುವ ಆತಂಕ ಎದುರಾಗಿದೆ. ಆರೋಗ್ಯ ಇಲಾಖೆ ಯುವಕನೊಂದಿಗೆ ಪ್ರಯಾಣ ಮಾಡಿದ್ದವರು ಸೇರಿದಂತೆ 35 ಮಂದಿಗೆ ಐಸೋಲೇಷನ್‌ಗೆ ಸೂಚನೆ ನೀಡಿದೆ.

ಕೇರಳದ ಕಣ್ಣೂರಿನ ಯುವಕ ಜುಲೈ 13ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಜುಲೈ 15ರಂದು ಯುವಕನಿಗೆ ಜ್ವರ ಕಾಣಿಸಿಕೊಂಡಿತ್ತು, ಮೈಯಲ್ಲಿ ಗುಳ್ಳೆಗಳು ಆಗಿದ್ದವು.

ದಕ್ಷಿಣ ಕನ್ನಡದ 15, ಉಡುಪಿಯ 6, ಕಾಸರಗೋಡಿನ 13 ಮತ್ತು ಕಣ್ಣೂರಿನ ಒಬ್ಬರು ಐಸೋಲೇಷನ್‌ನಲ್ಲಿದ್ದಾರೆ. ಸದ್ಯಕ್ಕೆ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಐಸೋಲೇಷನ್‌ನಲ್ಲಿರುವವರು ಆರೋಗ್ಯ ಇಲಾಖೆ ಸಂಪರ್ಕದಲ್ಲಿದ್ದಾರೆ.

ಇನ್ನೂ ಮಂಗಳೂರು ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳಿಗೂ ಸಹ 21 ದಿನಗಳ ಐಸೋಲೇಷನ್‌ಗೆ ಸೂಚನೆ

ನೀಡಲಾಗಿದೆ. 21 ದಿನಗಳ ಪ್ರತ್ಯೇಕ ವಾಸದ ಸಮಯದಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದಿದ್ದರೆ ಅವರಿಂದ ಇತರರಿಗೆ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

5 ದಿನದಲ್ಲಿ ದೇಶದಲ್ಲಿ 2 ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಮಾರ್ಗಸೂಚಿಗಳ ಅನ್ವಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಅಲ್ಲದೇ ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರವೂ ಸೂಚನೆ ನೀಡಿದೆ.

ಕಾಡು ಪ್ರಾಣಿಗಳ ಮೂಲಕ ಮಂಕಿಪಾಕ್ಸ್ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರು, ಅವರು ಮುಟ್ಟಿದ ವಸ್ತುಗಳನ್ನು ಮುಟ್ಟುವುದರಿಂದಲೂ ಹರಡುತ್ತದೆ. ಪ್ರಸ್ತುತ ವಿಶ್ವದ 63 ರಾಷ್ಟ್ರಗಳಲ್ಲಿ ಸುಮಾರು 9 ಸಾವಿರ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ.

Leave a Comment