ಬಂಟ್ವಾಳ :ತಾಲೂಕಿನ ಫರಂಗಿಪೇಟೆಯ ವಿಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ.21ರಿಂದ 26ರ ವರೆಗೆ ಉಡುಪಿ ಅದಮಾರು ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಈಶ ತೀರ್ಥ ಶ್ರೀಪಾದಂಗಳರವರ ದಿವ್ಯ ಉಪಸ್ಥಿತಿಯಲ್ಲಿ, ವೇದಮೂರ್ತಿ ಶ್ರೀ ಕೆ ಮುರಳಿ ಭಟ್ ಕಲ್ಲತಡಮೆ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ ಎಂದು ದೇವಸ್ಥಾನ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ ಶೆಟ್ಟಿ ಬರ್ಕೆ ಹೇಳಿದರು.
ಅವರು ಜ.19ರಂದು ದೇವಸ್ಥಾನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 40ವರ್ಷಗಳ ಹಿಂದೆ ಓಂ ಶ್ರೀ ವೀರಾಂಜನೇಯ ವ್ಯಾಯಮ ಶಾಲೆ ಎನ್ನುವ ಹೆಸರಿನಲ್ಲಿ ಮುಳಿ ಹುಲ್ಲಿನ ಕುಟೀರದಲ್ಲಿತರುಣರು ತಮ್ಮನ್ನು ತೊಡಗಿಸಿಕೊಂಡ ನಂತರ ಸುಸಜ್ಜಿತ ಕಟ್ಟಡವಾಗಿ ಮಾರ್ಪಡಿಸಿ ಶ್ರೀ ಆಂಜನೇಯ ಸ್ವಾಮಿಯ ಶಿಲಾಮೂರ್ತಿ ಪ್ರತಿಷ್ಠಾಪಿಸಿದರು,ನಂತರ ನಿತ್ಯ ಪೂಜೆ, ಪುನಸ್ಕಾರಗಳಿಂದ ವ್ಯಾಯಮ ಶಾಲೆ ಆಸ್ತಿಕ ಭಕ್ತರ ಶ್ರದ್ಧಾ ಭಕ್ತಿಯ ಆರಾಧನಾ ಕೇಂದ್ರವಾಗಿ ಬೆಳೆಯಿತು. 2018ರಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಶ್ರೀ ಆಂಜನೇಯನಿಗೆ ದೇಗುಲ ನಿರ್ಮಿಸಬೇಕೆಂದು ಗೋಚರವಾಯಿತು.ಈ ಪ್ರಕಾರ ತಕ್ಷಣವೇ ಕಾರ್ಯ ಪ್ರವೃತ್ತರಾದ ದೇವಸ್ಥಾನ ಆಡಳಿತ ಮಂಡಳಿಯು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಶ್ರೀ ಆಂಜನೇಯ ದೇಗುಲ ನಿರ್ಮಾಣ ಸಮಿತಿ ರಚಿಸಿ ಅ ಮೂಲಕ ದೇವಸ್ಥಾನ ನಿರ್ಮಾಣದ ಕೆಲಸ ಪ್ರಾರಂಭಿಸಿ ಇದೀಗ ಭವ್ಯ ಶಿಲಾಮಯ ದೇವಸ್ಥಾನ ನಿರ್ಮಾಣವಾಗಿ ಆಂಜನೇಯನ ಪ್ರತಿಷ್ಠೆಗೆ ಕ್ಷಣ ಗಣನೆ ಆರಂಭ ಆಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ತಾರಾನಾಥ ಕೊಟ್ಟಾರಿ ಮಾತನಾಡಿ,,ಜ.21ರಂದು ಬೆಳಿಗ್ಗೆ 10ರಿಂದ ತೋರಣ ಮಹೂರ್ತ, ಉಗ್ರಾಣ ಮಹೂರ್ತದೊಂದಿಗೆ ಉತ್ಸವ ಕಾರ್ಯಗಳು ಪ್ರಾರಂಭವಾಗಿ ಸಂಜೆ 3ರಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ, ಅಡ್ಯಾರು ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ ಬ್ರಹ್ಮರಕೊಟ್ಲು ಬ್ರಹ್ಮಸನ್ನಿಧಿಯಿಂದ ವೈಭವದ ಶೋಭಾ ಯಾತ್ರೆ ನಡೆಯಲಿದೆ ಜ 21ರಿಂದ 26ರ
ವರೆಗೆ ನಿರಂತರ ವೈದಿಕ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ ನಡೆಯಲಿದೆ, ಪ್ರತಿದಿನ ಧರ್ಮ ಸಭೆಯಲ್ಲಿ ಪೂಜ್ಯ ಸ್ವಾಮೀಜಿಗಳು ಆಶೀರ್ವಾಚನ ನೀಡಲಿದ್ದಾರೆ ಎಂದರು. ಜ.22ರಂದು 11ರಿಂದ 12.30ವರೆಗೆ ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರತಿಷ್ಠೆ ಪ್ರಯುಕ್ತ ವಿಶೇಷವಾಗಿ 6 ಗ್ರಾಮಗಳ ಭಕ್ತರಿಂದ ಶ್ರೀರಾಮ ತಾರಕ ಮಂತ್ರ ಜಪ ಮತ್ತು ಹನುಮಾನ್ ಚಾಲೀಸ ಪಠಣ ನಡೆಯಲಿದೆ ಎಂದು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ಅಜಿತ್ ಚೌಟ ದೇವಸ್ಯ ಮಾತನಾಡಿ ಬ್ರಹ್ಮಕಲಶೋತ್ಸವದ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿ ಕಾರ್ಯಕ್ರಮ ಸಾಂಗವಾಗಿ ನಡೆಯಲು ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು, ಸಂಚಾಲಕ ವಿಠ್ಠಲ್ ಆಳ್ವ ಗರೋಡಿ ,ಕಾರ್ಯಾಧ್ಯಕ್ಷ ಅರ್ಕುಳ ಕಂಪ ಸದಾನಂದ ಆಳ್ವ ,ವೀರಾಂಜನೇಯ ವ್ಯಾಯಾಮ ಶಾಲೆ ಅದ್ಯಕ್ಷ ಚಂದ್ರಶೇಖರ ಗಂಭೀರ ,ಪ್ರದಾನ ಸಂಚಾಲಕ ದೇವಸ್ಯ ಪ್ರಕಾಶ್ ಚಂದ್ರ ರೈ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್ ಬೆಂಜನಪದವು,ಪ್ರಮುಖರಾದ ಕೃಷ್ಣ ಕುಮಾರ್ ಪೂಂಜ,.ಜಯರಾಜ ಕೊಟ್ಟಾರಿ,, ಜಯರಾಜ್ ಕರ್ಕೆರ,ಸಂತೋಷ ಗಾಂಭೀರ, ಮನೋಜ್ ತುಪ್ಪಕಲ್ಲು, ಕವಿತಾ ದೇವದಾಸ ಅರ್ಕುಳ,ಪದ್ಮಾವತಿ ಶಂಕರ್ ತುಪ್ಪಕಲ್ಲು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ರವೀಂದ್ರ ಕಂಬಳಿ ಸ್ವಾಗತಿಸಿ, ಪ್ರಚಾರ ಸಮಿತಿಯ ಸಹ ಸಂಚಾಲಕರ ಸಂತೋಷ್ ಕುಲಾಲ್ ನೆತ್ತರಕೆರೆ ಧನ್ಯವಾದವಿತ್ತರು.














