ಪುದು ಗ್ರಾ ಪಂ: ಕೋಡಿಮಜಲು ತೇವು ಎಂಬಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ. ರಾಷ್ಟ್ರೀಯ ಹೆದ್ದಾರಿ ಬದಿಯ ತ್ಯಾಜ್ಯ ರಾಶಿಗೆ ಇನ್ನಾದರೂ ದೊರಕಿತೆ ಮುಕ್ತಿ..?

Coastal Bulletin
ಪುದು ಗ್ರಾ ಪಂ: ಕೋಡಿಮಜಲು ತೇವು ಎಂಬಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ. ರಾಷ್ಟ್ರೀಯ ಹೆದ್ದಾರಿ ಬದಿಯ ತ್ಯಾಜ್ಯ ರಾಶಿಗೆ ಇನ್ನಾದರೂ ದೊರಕಿತೆ ಮುಕ್ತಿ..?

ಬಂಟ್ವಾಳ: ದೇಶದಾದ್ಯಂತ ಸ್ವಚ್ಛ ಭಾರತದ ಮುಖೆನ ಹಲವಾರು ಯೋಜನೆಗಳನ್ನು ಸರಕಾರ ಕೈಗೊಂಡಿದ್ದರು ಕೂಡ ಜನರ ಇಚ್ಛಾಶಕ್ತಿಯ ಕೊರತೆಯಿಂದ ಗ್ರಾಮ ಮಟ್ಟದಲ್ಲಿ ಇನ್ನು ಕೂಡ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಾಮಿಸಿದೆ, ಹಲವಾರು ಗ್ರಾಮ ಪಂ ಗಳು ಈ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಬೆಂಗಳೂರು ರಸ್ತೆಗೆ ತಾಗಿಕೊಂಡಿರುವ ಪುದು ಗ್ರಾಮ ಪಂಚಾಯತ್ ಕೂಡ ತನ್ನ ವ್ಯಾಪ್ತಿಯ ತ್ಯಾಜ್ಯ ಸಮಸ್ಯೆಗೆ ಸಂಪೂರ್ಣ ಮುಕ್ತಿ ನೀಡಲು ಪಣತೊಟ್ಟು ಕಸ ವಿಲೇವಾರಿಗಾಗಿ ಕೋಡಿಮಜಲು ತೇವು ಎಂಬಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣವಾಗುತ್ತಿದ್ದು ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ, ಅಂದುಕೊಂಡಂತೆ ಬಾಕಿ ಉಳಿದಿರುವ ಸಣ್ಣ ಪುಟ್ಟ ಕಾಮಗಾರಿಗಳು ನಡೆದರೆ ನವೆಂಬರ್ ತಿಂಗಳಲ್ಲಿ ಘಟಕದ ಉದ್ಘಾಟನೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗ್ರಾಮಪಂಚಾಯತ್ ಆಗಿರುವಯದರಿಂದ ಇಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದು ಕಷ್ಟದ ಕೆಲಸವಾಗಿತ್ತು, ಜೊತೆಗೆ ಹೆದ್ದಾರಿ ಬದಿಯಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸ ಎಸೆಯಲಾಗುತ್ತಿತ್ತು. ಕಸ ಎಸೆಯುವುದನ್ನು ತಡೆಯುವ ದೃಷ್ಟಿಯಿಂದ ಮತ್ತು ಸ್ವಚ್ಚತಾ ಕಾರ್ಯದ ಬಗ್ಗೆ ಗ್ರಾಮ ಪಂಚಾಯತ್ ವಿಶೇಷ ಅಭಿಯಾನದ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿತ್ತಾದರೂ ಸಂಪೂರ್ಣ ತ್ಯಾಜ್ಯ ಮುಕ್ತವಾದ ಗ್ರಾಮವನ್ನಾಗಿ ಮಾಡುವ ಉದ್ದೇಶದಿಂದ ಕೋಡಿಮಜಲು ತೇವು ಎಂಬಲ್ಲಿ ಘಟಕ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಮನೆಮನೆಗೆ ಕಸ ಸಂಗ್ರಹಣಾ ವಾಹನವನ್ನು ಕಳಹಿಸಲಾಗುತ್ತಿದೆಯಾದರೂ, ಸಂಗ್ರಹಿಸದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತವಾದ ಜಾಗವಿರದ ಕಾರಣ ಪಂಚಾಯತ್ ಗೆ ನುಂಗಲಾರದ ತುತ್ತಾಗಿತ್ತು.ಆದರೆ ಇದೀಗ ಘಟಕದ ನಿರ್ಮಾಣವಾಗಿದ್ದು, ಇನ್ನೇನು ತಿಂಗೊಳಗೆ ಸಕಲ ವ್ಯವಸ್ಥೆಯ ಸಂಪೂರ್ಣ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯದ ವಿಲೇವಾರಿ ಮಾಡುವ ಬಗ್ಗೆ ಇಲ್ಲಿನ‌ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಘಟಕ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿತ್ತಾದರೂ ಬಳಿಕ ಇಲ್ಲಿನ ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಜಿಲ್ಲೆಯ ಬೇರೆ ಬೇರೆ ಕಡೆಯ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಗ್ರಾಮಸ್ಥರನ್ನು ಕರೆದುಕೊಂಡು ಹೋಗಿ ತೋರಿಸಿದ ಬಳಿಕ ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ಮಾದರಿ ಘಟಕದ ನಿರ್ಮಾಣದ ಭರವಸೆ ನೀಡಿದ ಬಳಿಕ ಇದೀಗ ಗ್ರಾಮಸ್ಥರು ಉತ್ತಮ ಬೆಂಬಲ ನೀಡುತ್ತಿದ್ದಾರೆ.

ಘಟಕ ನಿರ್ಮಾಣದ ಬಳಿಕ ಗ್ರಾಮದ ಅಭಿವೃದ್ಧಿ ಶಕೆ ಆರಂಭವಾಗಿದ್ದು, ರಸ್ತೆ,ವಿದ್ಯುತ್ ಚರಂಡಿ ಹೀಗೆ ಅನೇಕ ಮೂಲಭೂತ ಸೌಕರ್ಯಗಳನ್ನು ಗ್ರಾ.ಪಂ.ಒದಗಿಸಿದೆ. ಜೊತೆಗೆ ಉತ್ತಮವಾದ ಉದ್ಯಾನವನ ನಿರ್ಮಾಣದ ಯೋಜನೆ ತಯಾರಿಸಿದ್ದು,ಮಾದರಿ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಪುದು ಗ್ರಾಪಂ.ನ ವತಿಯಿಂದ ಇಂದು ಘಟಕಕ್ಕೆ ಬೇಟಿ ನೀಡಿದ್ದು ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ರುಕ್ಸಾನಾ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾ.ಪಂ.ಇ.ಒ.ಸಚಿನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ| ಸ್ಮ್ರತಿ, ಗುತ್ತಿಗೆದಾರ ಯಶೋಧರ, ಮಾಜಿ ಗ್ರಾ.ಪಂ.ಸದಸ್ಯರಾದ ಲವೀನಾ ಡಿ ಸೋಜ, ಗ್ರಾಮಪಂಚಾಯತ್ ಸಿಬ್ಬಂದಿ ಅಬ್ದುಲ್ ಸಲಾಂ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

 ಸ್ಚಚ್ಚತೆ ಬಹಳ ಪ್ರಾಮುಖ್ಯತೆ: ತಾ.ಪಂ.ಇ.ಒ.ಸಚಿನ್ ಕುಮಾರ್

ಪುದು ಗ್ರಾ.ಪಂ.ರಾಷ್ಟ್ರೀಯ ಹೆದ್ದಾರಿ ಅತೀ ಹತ್ತಿರದ ಗ್ರಾ‌.ಪಂ.ಆಗಿರುವುದರಿಂದ ಇಲ್ಲಿಯ ಕಸ ವಿಲೇವಾರಿ ಬಹಳಷ್ಟು ದೊಡ್ಡ ಸಮಸ್ಯೆಯಾಗಿತ್ತು.ಈ ಬಗ್ಗೆ ತ್ಯಾಜ್ಯ ನಿರ್ವಹಣೆ ಬಗ್ಗೆ ಅಭಿಯಾನ ಕೂಡ ಮಾಡಿ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದು, ಅದು ಯಶಸ್ವಿಯಾಗಿತ್ತು. ಆದರೆ ನಿರಂತರವಾಗಿ ತ್ಯಾಜ್ಯ ನಿರ್ವಹಣೆಗಾಗಿ ಗ್ರಾ.ಪಂ.ವ್ಯಾಪ್ತಿಯ ಕೋಡಿಮಜಲು ತೇವು ಎಂಬಲ್ಲಿ ಸುಮಾರು 40 ಸೇಂಟ್ಸ್ ಜಾಗದಲ್ಲಿ ಘಟಕ ನಿರ್ಮಾಣ ಮಾಡಿದ್ದೇವೆ. ಇಲ್ಲಿ ಹಸಿ ಹಾಗೂ

ಒಣ ಕಸವನ್ನು ಬೇರ್ಪಡಿಸಿ ಬಳಿಕ ಶಂಭೂರಿನಲ್ಲಿರುವ ಎಂ.ಅರ್.ಎಫ್.ತ್ಯಾಜ್ಯ ಘಟಕಕ್ಕೆ ಕಳುಹಿಸಲಾಗುತ್ತದೆ ಹಾಗೂ ಗೊಬ್ಬರವನ್ನು ಉತ್ಪಾದನೆ ಮಾಡುವ ಯೋಜನೆಗೆ ರೂಪುರೇಷೆ ತಯಾರಾಗಿದೆ. 

ಗ್ರಾಮಸ್ಥರಿಗೆ ತೊಂದರೆಯಾಗದಂತೆ ಘಟಕ ನಿರ್ಮಾಣ : ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ. 

ಪುದು ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಪ್ರತಿ ಮನೆಮನೆಗೂ ಕಸದ ವಾಹನ ಕಳುಹಿಸಿ ತ್ಯಾಜ್ಯವನ್ನು ಸಂಗ್ರಹಿಸಲು ನನ್ನ ಅವಧಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮನೆಮನೆಗೆ ಹೋಗಿ ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತವಾದ ಜಾಗದ ಸಮಸ್ಯೆ ಕಂಡುಬಂದಾಗ ಕೋಡಿಮಜಲು ತೇವು ಎಂಬಲ್ಲಿರುವ ಸುಮಾರು 40 ಸೆಂಟ್ಸ್ ಸರಕಾರಿ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲಾಗಿದೆ.

 ತ್ಯಾಜ್ಯ ಘಟಕದ ಬಹುತೇಕ ಕಾಮಗಾರಿ ಮುಕ್ತಾಯವಾಗಿದ್ದು, ಭದ್ರತಾ ದೃಷ್ಟಿಯಿಂದ ಕಟ್ಟಡದ ಸುತ್ತಲೂ ಕಾಂಪೌಂಡ್ ಗೋಡೆಯ ನಿರ್ಮಾಣ, ಹಸಿ ಕಸವನ್ನು ಶೇಖರಣೆ ಮಾಡುವ ಘಟಕದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜೊತೆಗೆ ವಾಯು ವಿಹಾರದ ದೃಷ್ಟಿಯಿಂದ ಘಟಕದ ಹತ್ತಿರವಿರುವ ಖಾಲಿ ಜಾಗದಲ್ಲಿ ಪಂಚಾಯತ್ ವತಿಯಿಂದ ಸಣ್ಣದಾದ ಉದ್ಯಾನವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಸ್ಥಳೀಯರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭರವಸೆ ನೀಡಿದಂತೆ ಸ್ವಚ್ಛತೆಗೆ ಆದ್ಯತೆ ನೀಡುವುದರ ಮೂಲಕ ಮೂಲಭೂತವಾದ ಸೌಕರ್ಯಗಳನ್ನು ಒದಗಿಸಿದ ಬಳಿಕವೇ ಉದ್ಘಾಟನೆ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮದ ಜನರ ಸಹಕಾರವಿರಲಿ : ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್

ಸ್ಥಳೀಯರಿಗೆ ತೊಂದರೆಯಾಗದ ರೀತಿಯಲ್ಲಿ ಒಣ ಹಾಗೂ ಹಸಿ‌ ಕಸದ ವಿಲೇವಾರಿ ಆಗಬೇಕು.ಜಿಲ್ಲೆಯ ಜನರು ನೋಡುವ ಮಾದರಿ ಘಟಕವಾಗಿ ರೂಪುಗೊಳ್ಳುಬೇಕು. ಶಾಸಕರ ಹಾಗೂ ಗ್ರಾಮ ಪಂಚಾಯತ್ ಅನುದಾನ ಬಳಸಿಕೊಂಡು ಉತ್ತಮವಾದ ಘಟಕ‌ ನಿರ್ಮಾಣಕ್ಕೆ ಗ್ರಾಮದ ಎಲ್ಲಾ ಜನರ ಸಹಕಾರವಿರಲಿ.



‌.

Leave a Comment