ಅಮ್ಟಾಡಿ: ಬಿರುಕು ಬಿಟ್ಟಿದೆ ಕೆಂಪುಗುಡ್ಡೆ ; ಹೆದ್ದಾರಿ ರಸ್ತೆ ಬದಿಯಲ್ಲೇ ಕುಸಿಯುವ ಭೀತಿ.

ಯಾದವ ಕುಲಾಲ್ ಬಿ ಸಿ ರೋಡ್.
ಅಮ್ಟಾಡಿ: ಬಿರುಕು ಬಿಟ್ಟಿದೆ ಕೆಂಪುಗುಡ್ಡೆ ; ಹೆದ್ದಾರಿ ರಸ್ತೆ ಬದಿಯಲ್ಲೇ ಕುಸಿಯುವ ಭೀತಿ.

ಬಿ.ಸಿ.ರೋಡ್ : ಬಂಟ್ವಾಳ ತಾಲೂಕಿನ ವಿಶಾಲವಾದ ಗುಡ್ಡ ಪ್ರದೇಶವೊಂದರಲ್ಲಿ ಕೆಂಪುಗುಡ್ಡೆಯಾಗಿದ್ದು, ಅದರ ಮಧ್ಯದಲ್ಲೇ ಹಾದು ಹೋಗಿದೆ ಲೋಕೋಪಯೋಗಿ ಇಲಾಖೆಯ ಹೆದ್ದಾರಿ ರಸ್ತೆ. ಕಳೆದ ವಾರ ಸುರಿದ ಭಾರೀ ಮಳೆಗೆ ಈ ಹೆದ್ದಾರಿ ರಸ್ತೆಯ ಬದಿಯಲ್ಲೇ ಇರುವ ಕೆಂಪುಗುಡ್ಡೆಯ ಗುಡ್ಡಪ್ರದೇಶ ಬಿರುಕು ಬಿಟ್ಟಿರುತ್ತದೆ. ರಸ್ತೆಯಿಂದ ಕೆಳಗೆ ಇಳಿಜಾರು ಪ್ರದೇಶದಲ್ಲಿ ವಾಸ್ತವ್ಯ ಇರುವ ಮನೆಗಳು, ಕೃಷಿಭೂಮಿ ಇರುತ್ತದೆ. ರಸ್ತೆ ಬದಿಯಲ್ಲಿ ಉದ್ದಕ್ಕೆ ಸುಮಾರು ೫೦೦ ಮೀಟರ್ ಉದ್ದದಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಅಷ್ಟು ಮಾತ್ರವಲ್ಲೇ ಗುಡ್ಡದ ನೇರ ಭಾಗದಲ್ಲೂ ಗುಡ್ಡ ಇಬ್ಬಾಗವಾಗಿರುವುದು ಕಾಣಿಸಿದೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಜಗದಂಬಿಕಾ ಭಜನಾ ಮಂದಿರದ ಸಮೀಪದ ಗುಡ್ಡ ಬಿರುಕು ಕಂಡು ಬಂದಿದ್ದು, ಈ ಭಾಗದಲ್ಲಿ ಸಂಚರಿಸುವ ಗ್ರಾಮಸ್ಥರು ಆತಂಕಕ್ಕೊಳಪಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ಗುಡ್ಡವನ್ನು ಸಮತಟ್ಟು ಮಾಡಿದ ಪರಿಣಾಮ ಗುಡ್ಡದ ಮತ್ತೊಂದು ಬದಿಯಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಗುಡ್ಡೆ ಬಿರುಕು ಕಂಡು ಬಂದಂತೆ ಅಮ್ಟಾಡಿ ಪಂಚಾಯತ್‌ನಿಂದ ಸಾರ್ವಜನಿಕರಿಗೆ ತಿಳಿಯಪಡಿಸಲು ರಸ್ತೆ ಇರುವ ಎರಡು ಬದಿಯಲ್ಲೂ ಸೂಚನಾ ಫಲಕವನ್ನೂ ಹಾಕಿದ್ದಾರೆ.

ಅಜೆಕಲ-ಕೆಂಪುಗುಡ್ಡೆ-ಕಲ್ಪನೆ ರಸ್ತೆ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ ೨೦೧೩ರಲ್ಲಿ ಸುಮಾರು ೪ ಕೋಟಿ ಅನುದಾನದಲ್ಲಿ ಬಂಟ್ವಾಳ ಉಪವಿಭಾಗದ ಲೋಕೋಪಯೋಗಿ ಇಲಾಖೆಗೆ ಅಚ್ಚುಕಟ್ಟಾಗಿ ಸುಸಜ್ಜಿತ ರಸ್ತೆಯು ಗುಡ್ಡದಿಂದ ನೀರು ನಿರಂತರವಾಗಿ ಇಳಿದು ಬರುವುದರಿಂದ ರಸ್ತೆಯೂ ಹಾಳಾಗಿರುತ್ತದೆ. ಈ ಭಾಗದಿಂದ ಕಲ್ಪನೆಗೆ ಕೇವಲ ೮ ಕಿ.ಮೀ. ದೂರ ಇರುವುದು. ಇಲ್ಲಿಂದ ಬೆಂಜನಪದವು ಮಾರ್ಗವಾಗಿ ನೀರುಮಾರ್ಗ-ಮಂಗಳೂರು, ಫರಂಗಿಪೇಟೆ-ಮಂಗಳೂರು ತಲುಪಬಹುದು. ಅದೇ ರೀತಿ ಪುಣ್ಯ ಕ್ಷೇತ್ರಗಳಾದ ಕಲ್ಪನೆ-ಪೊಳಲಿ, ಕಟೀಲು ಹಾಗೂ ಬಜಪೆ ವಿಮಾನ ನಿಲ್ದಾಣವನ್ನೂ ತಲುಪಬಹುದು. ಬಂಟ್ವಾಳ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಬಿ.ಸಿ.ರೋಡು ಹೋಗುವ ಬದಲು ಈ ಮಾರ್ಗವಾಗಿ ಮೇಲಿನ ಸ್ಥಳಗಳನ್ನು ತಲುಪುವುದು ಸುಲಭ ಸಾಧ್ಯವಾಗಿದೆ.

ಅಮ್ಟಾಡಿ ಗ್ರಾಮದ ಈ ರಸ್ತೆ ಗ್ರಾಮೀಣ ಭಾಗದಲ್ಲಿ ಮುಖ್ಯ

ರಸ್ತೆಯಾಗಿರುತ್ತದೆ. ಈ ರಸ್ತೆಯಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲದಿದ್ದರೂ ಅಟೋ ರಿಕ್ಷಾದ ಮೂಲಕ ಪ್ರಯಾಣ ಮಾಡುತ್ತಾರೆ. ಖಾಸಗಿ ಸ್ಥಳವಾದರೂ ಹಚ್ಚ ಹಸುರಾಗಿರುವ ಕೆಂಪುಗುಡ್ಡ ಪ್ರದೇಶವನ್ನು ಉಳಿಸಿಕೊಳ್ಳುವುದು ಜನರ ಕರ್ತವ್ಯ. ಗುಡ್ಡದ ಮೇಲೆ ಮಣ್ಣು ಅಗೆತ, ಗುಡ್ಡ ಒಂದು ಬದಿಯಿಂದ ಕುಸಿಯಲು ಪ್ರಾರಂಭವಾದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಳೆ ಕೇವಲ ನಾಲ್ಕು ದಿನ ಬಂದಿರುವುದು. ಜೋರು ಮಳೆ ಇನ್ನು ಬರಬೇಕಷ್ಟೆ. ಮಳೆಯು ಎಡೆಬಿಡದೆ ಸುರಿಯಲು ಆರಂಭವಾದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.

ಕೆಂಪುಗುಡ್ಡೆಯಲ್ಲಿ ಬಿರುಕು ಕಂಡು ಬಂದಿರುವುದರಿಂದ ಅಮ್ಟಾಡಿ ಪಂಚಾಯತ್‌ನಿಂದ ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರಿಗೆ ಗೊತ್ತಾಗುವಂತೆ ಬ್ಯಾನರ್ ಅಳವಡಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ಗಮನ ತಂದಿದ್ದು, ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಬಿರುಕು ಪರಿಶೀಲನೆ ಮಾಡಿದ್ದಾರೆ. ಮಳೆ ಕಡಿಮೆಯಾದ ನಂತರ ರಸ್ತೆ ಹಾಳಾಗದಂತೆ ಸೂಕ್ತ ಕ್ರಮ ಜರಗಿಸುವುದೆಂದು ತಿಳಿಸಿದ್ದಾರೆ.

-ಸುನೀಲ್ ಬಿ., ಉಪಾಧ್ಯಕ್ಷರು, ಅಮ್ಟಾಡಿ ಗ್ರಾಮ ಪಂಚಾಯತ್

ಕಳೆದ ವರ್ಷವೇ ಈ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಬಿರುಕು ಬಿಟ್ಟಿರುತ್ತದೆ. ಗುಡ್ಡದಿಂದ ನಿರಂತರವಾಗಿ ರಸ್ತೆಯಲ್ಲೇ ನೀರು ಸಂಚರಿಸುತ್ತಿದೆ. ದಿನಂಪ್ರತಿ ಇದೇ ರಸ್ತೆಯಲ್ಲಿ ನಾವು ದ್ವಿಚಕ್ರ ವಾಹನದ ಮುಖಾಂತರ ಸಂಚರಿಸುತ್ತಾ ಇದ್ದೇವೆ. ಯಾವುದೇ ಗಂಡಾಂತರ ಬಾರದಂತೆ ಈ ಮಳೆಗಾಲ ಕಳೆಯಲಿ ಎಂಬುದೇ ನಮ್ಮ ಆಶಯ.

-ಉಮೇಶ್, ಕಲ್ಪನೆ

Leave a Comment