ಬಂಟ್ವಾಳ: ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ 12 ನೇ ವರ್ಷದ ಮೂಡೂರು-ಪಡೂರು 'ಬಂಟ್ವಾಳ ಕಂಬಳ' ಮಾ.4ರಂದು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಕೆಲವು ವರ್ಷ ಸ್ಥಗಿತಗೊಂಡು ಬಳಿಕ ಕಳೆದ ವರ್ಷ ಸ್ಥಳ ಬದಲಾವಣೆಯೊಂದಿಗೆ ತರಾತುರಿಯಲ್ಲಿ ಆರಂಭಗೊಂಡ 'ಮೂಡೂರು-ಪಡೂರು' ಕಂಬಳ ಈ ಬಾರಿ ವ್ಯವಸ್ಥಿತ ರೀತಿಯಲ್ಲಿ ನಡೆಯಲಿದೆ. ಈಗಾಗಲೇ ಪಿಯೂಸ್ ಎಲ್.ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ಕಂಬಳದ ಯಶಸ್ವಿಗೆ ವಿವಿಧ ಸಮಿತಿ ಸದಸ್ಯರು ಸಕಲ ಸಿದ್ದತೆಯಲ್ಲಿ ತೊಡಗಿದ್ದಾರೆ ಎಂದರು. ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳವು ಜಿಲ್ಲೆಯಲ್ಲಿ 'ಬಂಟ್ವಾಳ ಕಂಬಳ'ವಾಗಿ ಗುರುತಿಸಿಕೊಂಡಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದವೂ ಸಿಕ್ಕಿದೆ. ಕಳೆದ ವರ್ಷ ಕಂಬಳ ಸೀಸನ್ ಮುಗಿದ ಬಳಿಕ ಕೋಣಗಳ ಮಾಲೀಕರ ಸಹಕಾರದಲ್ಲಿ ಮಳೆಯ ನಡುವೆಯೇ ನಡೆದು ಕೆಲವೊಂದು ಸಮಸ್ಯೆ ಎದುರಾಗಿತ್ತು. ಈ ಬಾರಿ ವ್ಯವಸ್ಥಿತವಾಗಿ ಕಂಬಳ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
ವಿಶೇಷ ಆಕರ್ಷಣೆ:
ಕಂಬಳ ವೀಕ್ಷಣೆಗೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ
ಗ್ಯಾಲರಿ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ಆಕರ್ಷಣೆಯಾಗಿ ವಿವಿಧ ಚಲನಚಿತ್ರ ನಟ-ನಟಿಯರು ಭಾಗವಹಿಸುವರು. ಒಟ್ಟು ಸುಮಾರು 200 ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ತಿಳಿಸಿದರು.
ಸಮಿತಿ ಸಂಚಾಲಕ ಬಿ.ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆ, ಪದಾಧಿಕಾರಿಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ, ರಾಜೀವ ಶೆಟ್ಟಿ ಎಡ್ತೂರು, ಎಂ.ಎಸ್.ಮಹಮ್ಮದ್, ಕೆ.ಪದ್ಮನಾಭ ರೈ, ಅವಿಲ್ ಮಿನೇಜಸ್, ಸುಭಾಶ್ಚಂದ್ರ ಶೆಟ್ಟಿ, ಉಮೇಶ್ ಕುಲಾಲ್, ದೇವಿಪ್ರಸಾದ್ ಪೂಂಜ, ಸದಾಶಿವ ಬಂಗೇರ, ನವಾಜ್ ಬಡಕಬೈಲು, ಶಬೀರ್, ಜಗದೀಶ್ ಕೊಯಿಲ, ರಮೇಶ್ ನಾಯಕ್ ರಾಯಿ, ವಾಸು ಪೂಜಾರಿ, ಸಂಜಿತ್ ಪೂಜಾರಿ, ವೆಂಕಪ್ಪ ಪೂಜಾರಿ, ಸುರೇಶ್ ಜೋರಾ, ವೆಲೇರಿಯನ್ ಡೇಸಾ, ಜಾನ್ ಸಿರಿಲ್ ಡಿಸೋಜ, ಬಿ.ಮೋಹನ್ ಮತ್ತಿತರರು ಇದ್ದರು.













