ಗಣೇಶ್ ಕಾಮತ್ ಮೂಡಬಿದಿರೆ

ಮೂಡುಬಿದಿರೆ: ನಾಡಿಗೆ ಶಿಕ್ಷಣ, ಸಾಂಸ್ಕೃತಿಕ ರಂಗದ ಮೇರು ಸಾಧಕ ಡಾ. ಮೋಹನ ಆಳ್ವ ಅವರಂತಹ ಸುಪುತ್ರನನ್ನು ನೀಡಿದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರಿಗೆ ಆ 15ರ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ತಮ್ಮ ಹುಟ್ಟಿದ ದಿನ, 104ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭವೂ ಹೌದು. ಈ ಸದವಸರದಲ್ಲಿ ಆಳ್ವಾಸ್ ಬಿವಿಎ ಅಂತಿಮ ವರ್ಷದ ವಿದ್ಯಾರ್ಥಿ ಮೂಡುಬಿದಿರೆಯ ತಿಲಕ್ ಕುಲಾಲ್ ನೈಲ್ ಆರ್ಟ್ ಎನ್ನುವ ಮೊಳೆಗಳಲ್ಲಿ ಮೂಡಿಸಿದ ಚಿತ್ರವನ್ನು ನೀಡಿ ಗಮನ ಸೆಳೆದಿದ್ದಾರೆ.

ಈಗಾಗಲೇ 400ಕ್ಕೂ ಅಧಿಕ  ಲೀಫ್ ಆರ್ಟ್ ಮೂಲಕ ಅಶ್ವತ್ಥ ಎಲೆಯಲ್ಲಿ ವ್ಯಕ್ತಿಚಿತ್ರಗಳನ್ನು ಕಟ್ಟಿಂಗ್ ನಲ್ಲಿ ಮೂಡಿಸಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದ ತಿಲಕ್ ಕಳೆದ ಒಂದು ತಿಂಗಳಿನಿಂದ ವಿಭಿನ್ನ ರೀತಿಯ  ಮೊಳೆಗಳನ್ನು ಜೋಡಿಸಿ ಚಿತ್ರ ರಚಿಸುವ ಹೊಸ ಸಾಹಸಕ್ಕೆ ಮುಂದಾಗಿದ್ದು ಬರೋಬ್ಬರಿ  14 ಸಾವಿರ ಮೊಳೆಗಳಲ್ಲಿ 4*2 ಫೀಟ್ ಫ್ಲೇವುಡ್ ಮೇಲೆ ಗಣಪತಿ ಕಲಾಕೃತಿ ಅರಳಿಸಿ ಕೈಚಳಕ ತೋರಿಸಿದ್ದಾರೆ. ಅದರ ಬೆನ್ನಲ್ಲೇ ಆನಂದ ಆಳ್ವರನ್ನೂ ಅರಳಿಸಿದ್ದಾರೆ. ಇಡೀ ಚಿತ್ರವನ್ನು ಯಾವುದೇ ಬ್ರಶ್, ಬಣ್ಣಗಳನ್ನು ಉಪಯೋಗಿಸದೇ ಮಾಡಿರುವುದು ವಿಶೇಷ.

ಹೊಸ ಪ್ರಯೋಗ:

ಮೊದಲು ಮೊಳೆಯೊಂದರಿಂದ ಗಣಪತಿಯ ಚಿತ್ರ ಬಿಡಿಸಿದ್ದು, ಬಳಿಕ ಮೊಳೆಗಳನ್ನು ಜೋಡಿಸಿ ಕಲಾಕೃತಿಯನ್ನು ಸಂಪೂರ್ಣಗೊಳಿಸಿದ್ದಾರೆ. ಇದೊಂದು ಹೊಸ ಪ್ರಯೋಗ. ನಾಡಿನಲ್ಲೇ ಅಪರೂಪದ್ದು ಎನ್ನುವ ತಿಲಕ್ ಇದೀಗ ಆರು ಸಾವಿರ ಮೊಳೆಗಳನ್ನು ಕಲಾತ್ಮಕವಾಗಿ ಜೋಡಿಸಿ ಒಂದೆರಡು ದಿನಗಳಲ್ಲೇ ಆಳ್ವರನ್ನು 3*2 ಫೀಟ್ ಫ್ಲೈವುಡ್ ಮೇಲೆ ಚಿತ್ರಿಸಿ ಭಾವಚಿತ್ರ ಕಲೆಗೂ ಸೈ ಎನಿಸಿದ್ದಾರೆ. ಕಳೆದ ಒಂದು ವರ್ಷದಿಂದ ಲೀಫ್ ಆರ್ಟ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿರುವ ತಿಲಕ್ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ , ಅವರ ಪುತ್ರ ವಿಜಯೇಂದ್ರ, ಮಾಜಿ ಸಚಿವ ಸಿ.ಟಿ ರವಿ, ಆನಂದ್ ಗುರೂಜಿ ಸಹಿತ ಹಲವು ಗಣ್ಯ ವ್ಯಕ್ತಿಗಳ ಭಾವಚಿತ್ರಗಳನ್ನು ಎಲೆಯನ್ನು ಮಾಡಿರುವುದಲ್ಲದೆ ಪೊಳಲಿ ಶ್ರೀ ರಾಜರಾಜೇಶ್ವರಿ, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿಯ ಚಿತ್ರಗಳು ಕೂಡ ತಿಲಕ್ ಕೈಚಳಕದಲ್ಲಿ ಎಲೆಯ ಮೇಲೆ ಮೂಡಿಸಿದ್ದರು.  ಟ್ಯಾಬ್ಲೊಗಳಿಗೆ ಬೃಹತ್ ಆಕಾರದ ವಿವಿಧ ಕಲಾಕೃತಿಗಳನ್ನು ಕೂಡ

ರಚಿಸಿಕೊಟ್ಟಿರುವ ಅವರು ಸಿನಿಮಾರಂಗದಲ್ಲಿ ಆರ್ಟ್ ಡೈರೆಕ್ಟರ್ ಆಗುವ ಕನಸು ಹೊತ್ತಿದ್ದಾರೆ.

ಶತಾಯುಷಿಯ ಬರ್ತ್ ಡೇ ಸದಾ ಸ್ಪೆಶಲ್!

ಆಳ್ವಾಸ್ ಸಂಸ್ಥೆಗಳ ರೂವಾರಿ ಡಾ. ಮೋಹನ ಆಳ್ವರಿಗೆ  ತನ್ನ ಯಶಸ್ಸಿನ ಬೆನ್ನೆಲುಬಾಗಿರುವ ಹೆತ್ತವರ ಬಗ್ಗೆ ವಿಶೇಷ ಕಾಳಜಿ. ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಇಡೀ ಆವರಣಕ್ಕೆ ತಾಯಿ ಸುಂದರಿ ಆನಂದ ಆಳ್ವರ ಹೆಸರಿದೆ. ತಂದೆ ಆನಂದ ಆಳ್ವರ ಹುಟ್ಟು ಹಬ್ಬವನ್ನು ವರ್ಷವೂ ತನ್ನ ಸಂಸ್ಥೆಗಳ ಕಟ್ಟಡ, ವಿಭಾಗಗಳ ಉದ್ಘಾಟನೆಯೊಂದಿಗೆ ಆಚರಿಸುವುದು ಬಹಳ ವರ್ಷಗಳಿಂದ ನಡೆದು ಬಂದಿದೆ. ಈ ಬಾರಿ ಆಳ್ವಾಸ್ ನಿರಾಮಯ ವಿಭಾಗ ಉದ್ಘಾಟನೆಗೊಳ್ಳುತ್ತಿದೆ.

ನುಡಿದಂತೆ ನಡೆದ ಹಾಗೂ ನಡೆದಂತೆ ನುಡಿದ ಶತಾಯುಷಿ ಮಿಜಾರುಗುತ್ತಿನ ಆನಂದ ಆಳ್ವರದ್ದು . ಅಂದಿನ ಕಾಲಕ್ಕೆ ಮಗ ಮೋಹನ ಆಳ್ವರನ್ನೂ ಮೀರಿಸಿದ ಸಾಧನೆ. ಕೃಷಿ, ಶಿಕ್ಷಣ, ಬೀಡಿ ಉದ್ಯಮ, ಅಬಕಾರಿ ಹೀಗೆ ಹಲವು ರಂಗಗಳಲ್ಲಿ ಹಲವು ಕುಟುಂಬಗಳಿಗೆ ಅವರು ಅನ್ನದಾತರಾದವರು. ಆಗಿನ ಕಾಲದಲ್ಲಿ 50ರ ದಶಕದಲ್ಲೇ ಕೊಯಮುತ್ತೂರಿನಿಂದ ಜನರೇಟರ್ ಹಾಕಿಸಿ ನಾಗಮಂಡಲ ಮಾಡಿಸಿದವರು. ಜಿಲ್ಲೆಯಲ್ಲಿ ಹೊಸತನಕ್ಕೆ ಸಾಕ್ಷಿಯಾದ ಮಿಜಾರು ಕಂಬಳಕ್ಕೆ ಆಗ ರಾಜ್ಯದ ಮುಖ್ಯಮಂತ್ರಿ ಗುಂಡೂರಾವ್ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡಿ ಪಾಲ್ಗೊಂಡದ್ದು , ವಿಷ್ಣುವರ್ಧನ್ ಅಭಿನಯದ ರುದ್ರನಾಗಕ್ಕಾಗಿ ಕಂಬಳ ಚಿತ್ರೀಕರಣಗೊಂಡದ್ದು ಎಲ್ಲವೂ ಸವಿ ನೆನಪೇ. ಜಿಲ್ಲೆಯಲ್ಲಿ ಧಾರ್ಮಿಕ

 ತಾಣಗಳ ಜೀರ್ಣೋದ್ಧಾರ, ಬ್ರಹ್ಮಕಲಶದ ಸಂದರ್ಭ ನಾಯಕತ್ವ. ದೊಡ್ಡ ಚಪ್ಪರ, ದಾನಿಯಾಗಿದ್ದ ಆನಂದ ಆಳ್ವ ಡೀಸೆಲ್ ಪಂಪ್ ಸೆಟ್ ಬಳಸಿ ಕೃಷಿ ನೀರಾವರಿಯನ್ನು ಈ ಭಾಗಕ್ಕೆ ಪರಿಚಯಿಸಿದ ಮೊದಲಿಗರೂ ಹೌದು.

Leave a Comment