Coastal Bulletin

ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಬಾಚಕೆರೆ ಸರಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ ನಿರ್ಮಾಣಗೊಳ್ಳುತ್ತಿದ್ದು,,ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ.

ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರದ ಪ್ರಧಾನ ತಂತ್ರಿ ಸರಪಾಡಿ ಅರಮನೆ ವೇ.ಮೂ.ಶಿವಪ್ರಸಾದ ಐತಾಳರ ನೇತೃತ್ವದಲ್ಲಿ ಮಾ.22-28 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.

ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಸಾನಿಧ್ಯವು ಭಕ್ತರ ನಂಬುಗೆಯ, ಇಷ್ಠಾರ್ಥ ಸಿದ್ಧಿಸುವ ಪುಣ್ಯನೆಲೆಯಾಗಿ ಪ್ರಸಿದ್ಧಿ ಪಡೆದಿದೆ. ಸುಮಾರು ಮೂರು ತಲೆಮಾರುಗಳ ಇತಿಹಾಸವಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮೂಲಸಾನಿಧ್ಯವನ್ನು ಸಮಸ್ತ ಭಕ್ತಾದಿಗಳ ಸಂಕಲ್ಪದಂತೆ ಇದೀಗ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವನ್ನಾಗಿ ರೂಪಿಸಲಾಗುತ್ತಿದೆ.

ಹಲವಾರು ವರ್ಷಗಳಿಂದ ಈ ಸಾನಿಧ್ಯದಲ್ಲಿ ವಾರ್ಷಿಕ ಉತ್ಸವ, ನವರಾತ್ರಿ ಉತ್ಸವ, ಸಂಕ್ರಮಣ ವಿಶೇಷ ಪೂಜೆ, ಅನ್ನಸಂತರ್ಪಣೆ, ಅಯ್ಯಪ್ಪ ಸ್ವಾಮಿ ಪೂಜೆ ಮೊದಲಾದ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಕ್ಷೇತ್ರದ ವತಿಯಿಂದ ನಡೆಯುವ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯು ನಾಡಿನ ವಿವಿಧೆಡೆ ಕಲಾಪ್ರದರ್ಶನ ನೀಡುತ್ತಾ ಯಶಸ್ವಿ ಎಂಟು

ವರ್ಷಗಳನ್ನು ಪೂರೈಸಿದ್ದು ಈ ಮೂಲಕ ಯಕ್ಷಗಾನ ಕಲೆ ಮತ್ತು ಕಲಾವಿದರ ಬೆಳವಣಿಗೆಗೂ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಪ್ರತಿವರ್ಷ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೂ ಶ್ರಮಿಸಲಾಗುತ್ತಿದೆ.

ಶ್ರೀ ಕ್ಷೇತ್ರದಲ್ಲಿ ಶಿಲಾಮಯ ಗರ್ಭಗುಡಿ,ಮುಖ ಮಂಟಪ, ಸುತ್ತು ಪೌಳಿ,ವಸಂತ ಮಂಟಪ, ತೀರ್ಥಬಾವಿ ಕಾಮಗಾರಿ ಪೂರ್ಣಗೊಂಡಿದ್ದು, ಹೃನ್ಮನ ಸೂರೆಗೊಳ್ಳುವ ಸುಂದರ ದೇವಾಲಯ ನಿರ್ಮಾಣಗೊಂಡಿದೆ.

ಜಾನಪದ ಕ್ಷೇತ್ರದ ದೈವಾರಾಧಕರು ಮತ್ತು ಜ್ಯೋತಿಷ ಪ್ರಶ್ನಾ ಚಿಂತಕರಾಗಿರುವ ದೇಜಪ್ಪ ಬಾಚಕೆರೆ ಅವರು ಕ್ಷೇತ್ರದ ಧರ್ಮದರ್ಶಿಯಾಗಿದ್ದು , ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಗೌರವಾಧ್ಯಕ್ಷರಾಗಿ ಮತ್ತು ಮೋಹನ್ ಗೌಡ ಇಡ್ಯಡ್ಕ ಅವರು ಅಧ್ಯಕ್ಷರಾಗಿರುವ ಜೀರ್ಣೋದ್ದಾರ ಸಮಿತಿ, ಸಂಜೀವ ಪೂಜಾರಿ ಗುರುಕೃಪಾ ಅವರು ಅಧ್ಯಕ್ಷರಾಗಿರುವ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳು ರಚನೆಗೊಂಡಿದ್ದು ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಕಾರ್ಯೋನ್ಮಖವಾಗಿದೆ.


 

Leave a Comment