ಪುತ್ತೂರು:ಸ್ವಾತಂತ್ರ್ಯ ರಥಕ್ಕೆ ಎಸ್ ಡಿ.ಪಿ.ಐ ಕಾರ್ಯರ್ತರು ತಡೆ ಒಡ್ಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸಂಚರಿಸುವ ರಥಕ್ಕೆ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ಗ್ರಾ.ಪಂ. ಅಧ್ಯಕ್ಷರು ಚಾಲನೆ ನೀಡಿ ಜೈಕಾರ ಹಾಕುತ್ತಿದ್ದಂತೆ ಎಸ್.ಡಿ.ಪಿ.ಐ. ಕಾರ್ಯಕರ್ತರು ಧಿಕ್ಕಾರ ಕೂಗಿ ಸ್ವಾತಂತ್ರ್ಯ ರಥಕ್ಕೆ ತಡೆ ಒಡ್ಡಿದ್ದಾರೆ.
ಈ ವೇಳೆ ಪರಸ್ಪರ ವಾಗ್ವಾದ ತಳ್ಳಾಟ ನಡೆದಿದ್ದು, ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒರವರು ಸಮಾಧಾನ ಪಡಿಸಲು ಯತ್ನಿಸಿದ್ದರೂ, ಕೇಳಿಸಿಕೊಳ್ಳದ ಎಸ್ಡಿಪಿಐ ಕಾರ್ಯಕರ್ತರು ವೀರ ಸಾವರ್ಕರ್ ಫೋಟೊ ತೆಗೆದು ಟಿಪ್ಪು ಸುಲ್ತಾನ್ ಫೋಟೊ ಅಳವಡಿಸುವಂತೆ ಪಟ್ಟು ಹಿಡಿದರು.
ಪರಿಸ್ಥಿತಿ ಉದ್ವಿಗ್ನ ಸ್ಥಿತಿ ಹಂತಕ್ಕೆ ಬಂದಾಗ ಸ್ಥಳಕ್ಕೆ ಧಾವಿಸಿದ ಪುತ್ತೂರು ನಗರ ಠಾಣಾ ಪೊಲೀಸರು
ಪ್ರತಿಭಟನಾಕಾರರನ್ನು ಚದುರಿಸಿ ರಥ ಸಾಗಲು ಅನುವು ಮಾಡಿ ಕೊಟ್ಟರು.
ರಥ ತಡೆದ ಎಸ್ ಡಿ ಪಿ ಐ ಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ತೀವ್ರವಾಗಿ ಖಂಡಿಸಿದ್ದಾರೆ.
'ರಥಕ್ಕೆ ಅಳವಡಿಸಲಾಗಿದ್ದ ದೇಶಭಕ್ತ ವೀರ ಸಾವರ್ಕರ್ ಭಾವಚಿತ್ರ ವನ್ನು ತೆಗೆಯಲು ಮುಂದಾಗಿದ್ದ ಮತೀಯವಾದಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡವಂತೆ ಪೊಲೀಸ್ ಇಲಾಖೆ ಗೆ ಸೂಚನೆ ನೀಡಿದ್ದೇನೆ.ಕಿಡಿಗೇಡಿಗಳ ಕೃತ್ಯದ ಹಿಂದೆ ಭಟ್ಕಳ ಹಾಗೂ ಕಾಸರಗೋಡು ಮೂಲದ ಮತೀಯ ಸಂಘಟನೆಗಳ ಪಿತೂರಿ ಶಂಕೆ ಇದೆ.ಈ ಪ್ರಕರಣವನ್ನು ಎನ್ ಐ ಎ ತನಿಖೆ ನಡೆಸುವಂತೆ' ಗೃಹ ಸಚಿವ ರನ್ನು ಆಗ್ರಹಿಸಿದರು.














