ಬಂಟ್ವಾಳ: ಯಕ್ಷಗಾನ ಕಲೆಯು ಜಾಗತಿಕ ಮಟ್ಟದಲ್ಲಿ ವಿಸ್ತರಿಸುತ್ತಿರುವ ಶ್ರೇಷ್ಠ ಕಲೆಯಾಗಿದ್ದು ಇದನ್ನು ರಾಜ್ಯ ಕಲೆ ಎಂದು ಘೋಷಣೆ ಮಾಡಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.
ಮಂಗಳೂರು ಉರ್ವಸ್ಟೋರ್‌ನ ಡಾ|ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆದ ರಕ್ಷಿತ್ ಶೆಟ್ಟಿ ಪಡ್ರೆ ಶಿಷ್ಯ ವೃಂದದ ಯಕ್ಷ ಸಿದ್ದಿ ಸಂಭ್ರಮ ’ಸಿದ್ದಿ ದಶಯಾನ’ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ೨೨ ಜಿಲ್ಲೆಗಳಲ್ಲಿ ವಿವಿಧ ಪ್ರಕಾರ ಗಳಲ್ಲಿ ಪ್ರಮುಖವಾಗಿರುವ ಯಕ್ಷಗಾನ ರಾಜ್ಯದ ಕಲೆಯಾಗಬೇಕು. ಯಕ್ಷಗಾನ ಕ್ಷೇತ್ರ ದಲ್ಲಿ ಬದಲಾವಣೆ ಬಂದರೂ ಕಲೆಗೆ ಕೊನೆ ಇಲ್ಲ, ಪ್ರಸ್ತುತ ಶಿಕ್ಷಣದ ಜತೆ ಯಕ್ಷಗಾನ ಬೆಸೆದು ಕೊಂಡಿರುವುದು ಯಕ್ಷಗಾನದ ಉಳಿವು, ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಕಟೀಲು ದೇವಳದ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ್ ಆಸ್ರಣ್ಣ ಮಾತನಾಡಿ, ಯಕ್ಷಗಾನದಿಂದ ಮಕ್ಕಳಿಗೆ ಪೌರಾಣಿಕ ಜ್ಞಾನ ಸಿಗುತ್ತದೆ. ಒಳಿತು-ಕೆಡುಕು ಗಳು, ನ್ಯಾಯ -ಅನ್ಯಾಯದ ಬಗ್ಗೆ ಅರಿವು ಮೂಡುತ್ತದೆ. ಉತ್ತಮ ಜೀವನ ಶೈಲಿಯ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಾಧ್ಯ ವಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಯಕ್ಷಗಾನ ಉಳಿಸಿ, ಬೆಳೆಸುವಲ್ಲಿ ಯಕ್ಷ ಶಿಕ್ಷಣ ಮಹತ್ತರ ಪಾತ್ರ ವಹಿಸಿದೆ. ಉತ್ತಮ ಕಲಾವಿದರನ್ನು ರೂಪಿಸುವ ರಕ್ಷಿತ್ ಶೆಟ್ಟಿ ಅವರ ಪ್ರಯತ್ನ ಅಭಿನಂದನೀಯ ಎಂದರು.
ಯಕ್ಷಗಾನ ಸಮೃದ್ಧ ಕಲೆ: ರಾಮನಗರ
ಉಪ ಪೊಲೀಸ್ ವರಿಷ್ಠಾಽಕಾರಿ ದಿನಕರ ಶೆಟ್ಟಿ ಮಾತನಾಡಿ, ಯಕ್ಷಗಾನ ಸಮೃದ್ಧ ಕಲೆಯಾಗಿದ್ದು, ಜಗದಗಲ ಪಸರಿಸಿದೆ. ಉನ್ನತ ಶಿಕ್ಷಣ ಪಡೆದರೂ ಯಕ್ಷಗಾನದಲ್ಲಿ ತೊಡಗಿಸಿರುವುದು ಸಂತಸವಾಗಿದೆ ಎಂದರು.
ನಿಟ್ಟೆ ಎನ್‌ಎಂಎಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ನಿರಂಜನ ಎನ್.ಚಿಪ್ಳೂಣ್ಕರ್, ಗುರುಪುರ ಬಂಟರ ಮಾತೃಸಂಘದ ಮಾಜಿ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು, ಮಂಗಳೂರು ಟ್ರಾಫಿಕ್ ಠಾಣೆಯ ಸಂತೋಷ್ ಪಡೀಲ್, ಉದ್ಯಮಿ ಎಂ.ಹರಿ ರಾವ್ ಕೈಕಂಬ, ಯಕ್ಷ ಮಂಜೂಷ ನಿರ್ದೇಶಕಿ ವಿದ್ಯಾ ಕೂಳ್ಯೂರು, ಹಿರಿಯ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಪಡ್ರೆ ರಚನೆಯ ಯಕ್ಷ ಶಿಕ್ಷಣ ಪುಸ್ತಕ ಬಿಡುಗಡೆಗೊಳಿಸಲಾಯಿತು. ಪ್ರತಿಭಾ ಪುರಸ್ಕಾರ, ಯಕ್ಷಸಿದ್ಧಿ ಪ್ರಶಸ್ತಿ-ಸಮ್ಮಾನ ನಡೆಯಿತು. ರಕ್ಷಿತ್ ಶೆಟ್ಟಿ ಪಡ್ರೆ ಮತ್ತು ಅವರ ತಾಯಿ ಗೀತಾ ಶೆಟ್ಟಿ ಅವರನ್ನು ಶಿಷ್ಯ ವೃಂದದ ವತಿಯಿಂದ ಸಮ್ಮಾನಿಸಲಾಯಿತು. ೩೦೦ಕ್ಕೂ ಮಿಕ್ಕಿ ಯಕ್ಷ ವಿದ್ಯಾರ್ಥಿಗಳಿಂದ ವಿವಿಧ ಯಕ್ಷಗಾನ ಪ್ರದರ್ಶನ ನಡೆಯಿತು.
ಪ್ರಕಾಶ್ ಮೂಡಿತ್ತಾಯ ಸ್ವಾಗತಿಸಿದರು. ಉಮೇಶ್ ಆಚಾರ್ಯ ವಂದಿಸಿದರು. ರವಿ ಪ್ರಸಾದ್ ಶೆಟ್ಟಿ ನಿರೂಪಿಸಿದರು.















