ಪಿಲಾತಬೆಟ್ಟು: ಗ್ರಾ ಪಂ ನಲ್ಲಿ ರಾಜ್ಯದ ಮೊದಲ ಜೀವನೋಪಾಯ ಸೇವಾ ಕೇಂದ್ರ ಉದ್ಘಾಟನೆ.

Coastal Bulletin
ಪಿಲಾತಬೆಟ್ಟು: ಗ್ರಾ ಪಂ ನಲ್ಲಿ ರಾಜ್ಯದ ಮೊದಲ ಜೀವನೋಪಾಯ ಸೇವಾ ಕೇಂದ್ರ ಉದ್ಘಾಟನೆ.

ಬಂಟ್ವಾಳ: ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM), ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್ ಅಡಿಯಲ್ಲಿ ಬೆಳಕು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಪಿಲಾತಬೆಟ್ಟು ಇವರ ಆಶ್ರಯದಲ್ಲಿ ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನೆ – ಸಮಗ್ರ ಕೃಷಿ ಸಮೂಹ (MKSP-IFC) ಯೋಜನೆಯಡಿ “ಜೀವನೋಪಾಯ ಸೇವಾ ಕೇಂದ್ರ”ದ ಉದ್ಘಾಟನಾ ಕಾರ್ಯಕ್ರಮವು ಪಿಲಾತಬೆಟ್ಟು ಗ್ರಾಮ ಪಂಚಾಯತ್‌ನ ನಯನಾಡು ಪರಿಸರದಲ್ಲಿ ನಡೆಯಿತು.

ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಜೀವನೋಪಾಯ ಸೇವಾ ಕೇಂದ್ರವನ್ನು ಉದ್ಘಾಟಿಸಿ, ಜೀವನೋಪಾಯ ಅಭಿವೃದ್ಧಿಗೆ ಪೂರಕವಾಗುವ ಹಿಟ್ಟಿನ ಗಿರಣಿ ಘಟಕ ಹಾಗೂ ತೆಂಗಿನ ನಾರು ಸಂಸ್ಕರಣಾ ಯಂತ್ರಗಳನ್ನು ಲೋಕಾರ್ಪಣೆಗೊಳಿಸಿ, ಅವುಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ, ಮಾತನಾಡಿ ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊಂಡಿರುವ ಈ ಜೀವನೋಪಾಯ ಸೇವಾ ಕೇಂದ್ರವು ಚಟುವಟಿಕೆಗಳಲ್ಲಿಯೂ ಮಾದರಿಯಾಗಬೇಕು ಎಂದು ತಿಳಿಸಿದರು. ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಬದುಕಿಗೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಇಂತಹ ಕೇಂದ್ರಗಳು ಮಹತ್ವದ ವೇದಿಕೆಯಾಗಲಿವೆ ಎಂದು ಹೇಳಿದರು. ಮಹಿಳೆಯರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಸ್ವಂತ ಉದ್ಯಮಗಳ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು.

ಸಂಜೀವಿನಿ-ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ  ಹರಿಪ್ರಸಾದ್ ಮಾತನಾಡಿ, ಸಮಗ್ರ ಕೃಷಿ ಸಮೂಹ ಯೋಜನೆಯಡಿ ಆರಂಭವಾದ ಈ ಸೇವಾ ಕೇಂದ್ರವು ಮಹಿಳಾ ರೈತರಿಗೆ ಕೃಷಿ ಆಧಾರಿತ ಉದ್ಯಮ, ಮೌಲ್ಯವರ್ಧನೆ, ಉತ್ಪನ್ನಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ ಸಂಪರ್ಕಕ್ಕೆ ಸಹಕಾರಿಯಾಗಲಿದೆ ಎಂದರು. ಮಹಿಳೆಯರು ಗುಂಪು ಆಧಾರಿತ ಚಟುವಟಿಕೆಗಳಲ್ಲಿ ತೊಡಗಿ ಕುಟುಂಬ ಹಾಗೂ ಸಮಾಜದ

ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ  ತುಂಗಪ್ಪ ಬಂಗೇರ ಮಾತನಾಡಿ, ಮಹಿಳೆಯರು ಸರ್ಕಾರದ ಯೋಜನೆಗಳು ಹಾಗೂ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಣ್ಣ ಮಟ್ಟದಲ್ಲಿ ಆರಂಭಿಸಿದ ಉದ್ಯಮಗಳನ್ನು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸ್ವಉದ್ಯೋಗ ಘಟಕಗಳಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಪಿಲಾತಬೆಟ್ಟು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ ಪಿ. ರಾವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ  ನಾರಾಯಣ್ ಭಟ್, ಮಾಜಿ ಪಂಚಾಯತ್ ಅಧ್ಯಕ್ಷರಾದ  ಶಾರದಾ, ಮಾಜಿ ಪಂಚಾಯತ್ ಸದಸ್ಯರಾದ  ಲಕ್ಷ್ಮೀ ನಾರಾಯಣ ಹೆಗ್ಡೆ ಹಾಗೂ  ನೆಲ್ವಿಸ್ಟರ್ ಪಿಂಟೋ, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಗೀತಾ ಹೆಗ್ಡೆ, ಬಂಟ್ವಾಳ ಸಂಜೀವಿನಿ ಎನ್‌ಆರ್‌ಎಲ್‌ಎಂ ಕೃಷಿಯೇತರ ತಾಲೂಕು ವ್ಯವಸ್ಥಾಪಕರಾದ  ಪ್ರದೀಪ್ ಕಾಮತ್, ಕೃಷಿ ತಾಲೂಕು ವ್ಯವಸ್ಥಾಪಕರಾದ ಕುಮಾರಿ ಸಾಂಘವಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು, ಸಂಜೀವಿನಿ ಸಿಬ್ಬಂದಿಗಳು ಹಾಗೂ ಸಮಗ್ರ ಕೃಷಿ ಸಮೂಹದ ಸದಸ್ಯರು ಉಪಸ್ಥಿತರಿದ್ದರು.

ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ  ಸೀತಾ ಕಾರ್ಯಕ್ರಮ ನಿರೂಪಿಸಿದರು. ಬಿ.ಸಿ. ಸಖಿ ಅನುರಾಧ ಸ್ವಾಗತಿಸಿದರು. ಸುಜಾತಾ ಪ್ರಾರ್ಥಿಸಿದರು. ಜಯಂತಿ ಧನ್ಯವಾದ ಸಮರ್ಪಿಸಿದರು.

Leave a Comment