ಬಂಟ್ವಾಳ: ಕಳೆದ 1981ರಲ್ಲಿ ಸ್ವಾತಂತ್ರ್ಯ ಯೋಧ ಡಾ.ಅಮ್ಮೆಂಬಳ ಬಾಳಪ್ಪ ಮತ್ತು ಸಹಕಾರಿ ಧುರೀಣ ಬಿ. ಹೂವಯ್ಯ ಮೂಲ್ಯ ಇವರ ನೇತೃತ್ವದಲ್ಲಿ ಆರಂಭಗೊಂಡ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಉಳ್ಳಾಲ ತಾಲ್ಲೂಕಿನ ಬೋಳಿಯಾರು ಎಂಬಲ್ಲಿ ಮೇ.17ರಂದು ಬೆಳಿಗ್ಗೆ ಗಂಟೆ 10.30ಕ್ಕೆ 18ನೇ ಶಾಖೆ ಆರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಕುಲಾಲ್ ಹೇಳಿದ್ದಾರೆ. ಬಂಟ್ವಾಳದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ನೂತನ ಶಾಖೆಯನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದು, ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು' ಎಂದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭದ್ರತಾ ಕೊಠಡಿ ಉದ್ಘಾಟಿಸಲಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಅವರು ಸೇಫ್ ಲಾಕರ್ ಉದ್ಘಾಟಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ಕಂಪ್ಯೂಟರ್ ಸೌಲಭ್ಯ ಉದ್ಘಾಟಿಸಲಿದ್ದು, ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ಅವರು ಠೇವಣಿ ಪತ್ರ ಬಿಡುಗಡೆಗೊಳಿಸುವರು ಎಂದು ಅವರು ತಿಳಿಸಿದರು.
ಸಂಘದ ಸಿಇಒ ಭೋಜ ಮೂಲ್ಯ ಮಾತನಾಡಿ, ' ಸಂಘವು ಕಳೆದ ಸಾಲಿನಲ್ಲಿ ಒಟ್ಟು ರೂ 1,432.13 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ, ರೂ 5.28 ಕೋಟಿ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ.17 ರಷ್ಟು ಡಿವಿಡೆಂಡ್ ನೀಡಿದೆ' ಎಂದರು. ಈಗಾಗಲೇ ಸದಸ್ಯರ ಮಕ್ಕಳ ಶಿಕ್ಷಣಕ್ಕೆ ನೆರವು ಸೇರಿದಂತೆ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸೌಲಭ್ಯ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನೀಡುತ್ತಿದೆ. ಇದೀಗ ಗ್ರಾಹಕರ ಅನುಕೂಲಕ್ಕಾಗಿ ನೆಫ್ಟ್, ಆರ್ ಟಿ ಜಿ ಎಸ್, ಗೂಗಲ್ ಪೇ, ಪೋನ್ ಪೇ,
ಯುಪಿಐ ಸೌಲಭ್ಯ ಮೂಲಕ ಖಾತೆಗೆ ನೇರ ಹಣ ಜಮೆ, ತಾಲ್ಲೂಕಿನ ಸಹಕಾರಿ ಸಂಘಗಳ ಪೈಕಿ ಪ್ರಥಮ ಬಾರಿಗೆ ಗ್ರಾಹಕರ ಬ್ಯಾಂಕ್ ಖಾತೆ ಸಂಖ್ಯೆ ಜೊತೆಗೆ ಐಸಿಐಸಿಐ ಬ್ಯಾಂಕಿನ ಸಹಯೋಗದಲ್ಲಿ ಐ ಎಫ್ ಎಸ್ ಸಿ ಕೋಡ್ ನೀಡುವ ಮೂಲಕ ತ್ವರಿತ ಹಣ ವಿಲೇವಾರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಅವರು ವಿವರಿಸಿದರು.
ಮುಂದಿನ ದಿನಗಳಲ್ಲಿ ಉಜಿರೆ, ಮಂಗಳಾದೇವಿ, ಸುಳ್ಯ, ಗುರುಪುರ-ಕೈಕಂಬ ಮತ್ತು ಉಡುಪಿ ಜಿಲ್ಲೆಯ ಶಂಕರನಾರಾಯಣಪುರದಲ್ಲಿ ಹೊಸ ಶಾಖೆ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜನಾರ್ದನ ಬೊಂಡಾಲ, ನಿರ್ದೇಶಕರಾದ ರಮೇಶ ಸಾಲ್ಯಾನ್, ಅರುಣ್ ಕುಮಾರ್ ಕೆ., ಸತೀಶ್, ಬಿ. ರಮೇಶ ಸಾಲ್ಯಾನ್, ಸುರೇಶ್ ಕುಲಾಲ್ ಎನ್., ಭೋಜ ಸಾಲಿಯಾನ್, ಕಿರಣ್ ಕುಮಾರ್ ಎ., ಹರೀಶ್, ಪ್ರೇಮನಾಥ ಬಂಟ್ವಾಳ್, ಜಗನ್ನಿವಾಸ ಗೌಡ, ಗಣೇಶ ಸಮಗಾರ, ರೇಖಾ ನಾಯಕ್, ಶಾಖಾಧಿಕಾರಿ ಹರೀಶ್ ಉಪಸ್ಥಿತರಿದ್ದರು.














