ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ತುಂಬೆ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ಇದರ 35ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏಪ್ರಿಲ್ 7 ಶುಕ್ರವಾರ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ಹಾಗೂ ಏಪ್ರಿಲ್ 8 ಶನಿವಾರ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಶುಕ್ರವಾರ ನಡೆದ ಶ್ರೀ ದುರ್ಗಾ ನಮಸ್ಕಾರ ಪೂಜೆಯ ಹಿನ್ನೆಲೆಯಲ್ಲಿ ಪೊಳಲಿ ತಪೋವನದ ಪರಮಪೂಜ್ಯ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರನ್ನು ಸಂಘದ ಸದಸ್ಯರು ಚೆಂಡೆ ಮದ್ದಳೆ ನಾದದ ಜೊತೆಗೆ ಮಹಿಳಾ ಸದಸ್ಯೆಯರು ಪೂರ್ಣ ಕುಂಭ ಸ್ವಾಗತ, ಕುಣಿತ ಭಜನೆ ಮೂಲಕ ಚಾಮುಂಡೇಶ್ವರಿ ಕಟ್ಟೆ ಕೊಟ್ಟಿಂಜದ ಬಳಿಯಿಂದ ಆಶೀರ್ವಾದ್ ಸೇವಾ ಸಂಘಕ್ಕೆ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿದರು, ಈ ಸಂಧರ್ಭದಲ್ಲಿ ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರುಗಳು, ಗೌರವ ಸಲಹೆಗಾರರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಸಂಜೆ ಸಂಘದ ಗೌರವ ಸಲಹೆಗಾರರಾದ ಜಗನ್ನಾಥ್ ಸಾಲಿಯಾನ್ ಕೊಟ್ಟಿಂಜ, ವೈಷ್ಣವಿ ಎಂಟರ್ಪ್ರೈಸಸ್ ತುಂಬೆ ಇವರು ಸಂಘಕ್ಕೆ ಕೊಡುಗೆಯಾಗಿ ನೀಡಿದ ವಾಟರ್ ಪ್ಯೂರಿಫಯರ್ ಉದ್ಘಾಟನೆಯನ್ನು ಪರಮಪೂಜ್ಯ ಪೊಳಲಿ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ತನ್ನ ಅಮೃತ ಹಸ್ತದಿಂದ ನೆರವೇರಿಸಿದರು. ಸಂಜೆ 3.30 ರಿಂದ ನಡೆದ ನಿರಂತರ ಭಜನಾ ಕಾರ್ಯಕ್ರಮ ಬಳಿಕ ರಾತ್ರಿ 7 ರಿಂದ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಂಘದ 35ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬೊಳ್ಳಾರಿ ಅಂಗನವಾಡಿ ಶಿಕ್ಷಕಿ ಪ್ರಭಾವತಿ ಹರೀಶ್ ಮಜಿ ಹಾಗೂ ಉಷಾ ವಸಂತ್ ಮಾರಿಪಳ್ಳ ಇವರನ್ನು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಹಿರಿಯ ಸದಸ್ಯರಾದ ಬೇಬಿ ತುಂಬೆ ಇವರ ಜೊತೆ
ಕಲಾ ಪ್ರತಿಭೆಗಳಾದ ಯಶೋಧರಾ ಬೊಳ್ಳಾರಿ ಮತ್ತು ಶಶಿಧರ್ ಬೊಳ್ಳಾರಿ ಜೊತೆಗೆ ಸಂಘದ ಭಜನಾ ಪ್ರಮುಖ ಅರ್ಚಕರಾದ ಸುಧಾಕರ್ ಕೊಟ್ಟಿಂಜ ಮತ್ತು ಸಂಘಕ್ಕೆ ಮಾದರಿಯಾದ ಬಾಬು ಬೊಳ್ಳಾರಿ, ವಿಮಲ ಕೊಟ್ಟಿಂಜ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸ್ವಾಗತಿಸಲಾಯಿತು.
ವೇದಿಕೆಯಲ್ಲಿ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ, ಉದ್ಯಮಿ ಉಮೇಶ್ ಶೆಟ್ಟಿ ಬರ್ಕೆ, ಧಾರ್ಮಿಕ ಮುಖಂಡ ಅನಿಲ್ ಪಂಡಿತ್, ಅರ್ಚಕರಾದ ಪೊಳಲಿ ಗಿರಿ ಪ್ರಕಾಶ್ ತಂತ್ರಿ, ಸುಪ್ರೀತ್ ಆಳ್ವ ಅಧ್ಯಕ್ಷರು ಬಂಟ್ವಾಳ ವಾಲಿಬಾಲ್ ಅಸೋಸಿಯೇಷನ್, ಸೋಮಪ್ಪ ಕೋಟ್ಯಾನ್, ಹಿಂದೂ ಮುಖಂಡರಾದ ಭರತ್ ಕುಮ್ಡೇಲ್ ಮತ್ತು ವಿಜಯ್ ಕುಮಾರ್ ಕಜೆಕಂಡ ಸೇರಿದಂತೆ ಸಂಘದ ಗೌರವಾಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ ಮತ್ತು ಪಾರ್ವತಿ ಐತ್ತಪ್ಪ ಕುಲಾಲ್, ಸಂಘದ ಅಧ್ಯಕ್ಷರಾದ ಚೆನ್ನಕೇಶವ ಬೊಳ್ಳಾರಿ ಮತ್ತು ಜಲಜಾಕ್ಷಿ ವಿಜಯ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಪ್ರವೇಶ್ ಕೋಟ್ಯಾನ್ ಮತ್ತು ಶ್ರುತಿ ರಾಕೇಶ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ರಮಾನಾಥ್ ಅಮೀನ್ ಮುದಲ್ಮೆ ಸ್ವಾಗತಿಸಿ, ಸುಶಾನ್ ಬೊಳ್ಳಾರಿ ಸಂಘದ ವರದಿ ಮಂಡನೆ ಮಾಡಿದರು, ಸಂಘದ ಗೌರವ ಸಲಹೆಗಾರರಾದ ಯೋಗೀಶ್ ಬೊಳ್ಳಾರಿ ಮತ್ತು ಲಿಖಿತಾ ಬೊಳ್ಳಾರಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರು ಹಾಗೂ ಸದಸ್ಯೆಯರಿಂದ ವಿಶೇಷವಾಗಿ ನಡೆದ ನೃತ್ಯ-ಗಾನ-ವೈಭವ ಹಾಗೂ ಸಂಘದ ಸದಸ್ಯರು ಹಾಗೂ ಸದಸ್ಯೆಯರು ಅಭಿನಯಿಸಿ, ಸಂಘದ ಸದಸ್ಯ ಶಶಿಧರ್ ಬೊಳ್ಳಾರಿ ಸ್ವತಃ ಕಥೆ ಬರೆದು ನಿರ್ದೇಶಿಸಿದ ಮರಪಡಾ ನೆಂಪುದೀಲಾ..! ಎಂಬ ನಾಟಕ ಪ್ರದರ್ಶನಗೊಂಡು ಜನರಿಂದ ಪ್ರಶಂಸೆ ಪಡೆಯಿತು.













