ವಗ್ಗ ಸರಕಾರಿ ಪ್ರೌಢ ಶಾಲೆಯಲ್ಲಿ ಜಲಜಾಗೃತಿ ಕ್ರಾಂತಿ. ಪರಿಸರದಿಂದಲೇ ಮೂಲಭೂತ ಸೌಕರ್ಯ ಪಡೆದ ಕೀರ್ತಿ ಸರಕಾರಿ ಶಾಲೆಗೆ.

ಯಾದವ ಕುಲಾಲ್ ಬಿ ಸಿ ರೋಡ್.
ವಗ್ಗ ಸರಕಾರಿ ಪ್ರೌಢ ಶಾಲೆಯಲ್ಲಿ ಜಲಜಾಗೃತಿ ಕ್ರಾಂತಿ. ಪರಿಸರದಿಂದಲೇ ಮೂಲಭೂತ ಸೌಕರ್ಯ ಪಡೆದ ಕೀರ್ತಿ ಸರಕಾರಿ ಶಾಲೆಗೆ.

ಬಿ.ಸಿ.ರೋಡ್ : ಮಳೆ ನೀರು ನದಿ ಸೇರಿ ಸಮುದ್ರ ಪಾಲಾಗುವುದರ ಬದಲು, ಭೂಮಿಯಲ್ಲೇ ಇಂಗಿ ಅಂತರ್ಜಲ ಮಟ್ಟ ಹೆಚ್ಚಾಗುವಂತೆ ಮಾಡುವುದಕ್ಕೋಸ್ಕರ ಶಾಲೆಯಲ್ಲಿ ಬರುವ ಮಳೆ ನೀರನ್ನು ಎಲ್ಲಿಯೂ ವ್ಯಯವಾಗದಂತೆ ಪೈಪ್ ಅಳವಡಿಸಿ ಬೋರ್‌ವೆಲ್‌ಗೆ ಹರಿದು ಹೋಗುವಂತೆ ಮಾಡಿ ಮಳೆ ಕೊಯ್ಲು ಮೂಲಕ ಜಲಜಾಗೃತಿಯನ್ನು ಮಾಡಿರುವುದು ಹಾಗೂ ಸೂರ್ಯನ ಬೆಳಕಿನಿಂದಲೇ ಶಾಲಾ ಫ್ಯಾನ್, ಲೈಟ್ ಉರಿಯಲು ಸೋಲಾರ್ ಅಳವಡಿಸಿ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯವನ್ನು ಪರಿಸರದಿಂದಲೇ ಪಡೆಯುತ್ತಿರುವ ಕೀರ್ತಿ ವಗ್ಗ ಸರಕಾರಿ ಪ್ರೌಢ ಶಾಲೆಗೆ ಸೇರಿದೆ.

ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದಲ್ಲಿರುವ ವಗ್ಗ ಸರಕಾರಿ ಪ್ರೌಢ ಶಾಲೆಗೆ ಶಾಶ್ವತವಾಗಿ ಕುಡಿಯುವ ನೀರಿನ ಯಾವುದೇ ಕೊರತೆ ಬಾರದಂತೆ ದಾನಿಗಳ ಮೂಲಕ ೩.೫ ಲಕ್ಷ ವೆಚ್ಚದಲ್ಲಿ ಮಳೆ ಕೊಯ್ಲು ನಿರ್ಮಾಣ ಮತ್ತುಮೂರು ಲಕ್ಷ ವೆಚ್ಚದಲ್ಲಿ ಸೋಲಾರ್ ಲೈಟ್ ಅಳವಡಿಸಿ ಮೂಲಭೂತ ಸೌಕರ್ಯಗಳಿಂದ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಬೋರ್‌ವೆಲ್‌ಗೆ ಮಳೆಕೊಯ್ಲು ನಿರ್ಮಾಣ : ಶಾಲೆಯ ಒಂದು ಬದಿಯಲ್ಲಿ ಬೋರ್‌ವೆಲ್ ಇದ್ದು ಅದರ ಸುತ್ತಲೂ ಆರು ಫೀಟ್ ಅಗಲ, ೧೦ ಫೀಟ್ ಉದ್ದ ಮತ್ತು ೪೦ ಫೀಟ್ ಆಳದ ಹೊಂಡವನ್ನು ಮಾಡಿ ಅದರಲ್ಲಿ ವೃತ್ತಾಕಾರದ ಬಾವಿ ರಿಂಗನ್ನು ಬೋರ್‌ವೆಲ್‌ಗೆ ಹಾನಿಯಾಗದಂತೆ ಅಳವಡಿಸಿ, ರಿಂಗ್ ಹೊರ ಭಾಗದಲ್ಲಿ ಸುತ್ತಲೂ ಜಲ್ಲಿ ಕಲ್ಲುಗಳ ನ್ನು ತುಂಬಿಸಿ ಮಳೆ ನೀರನ್ನು ಅದಕ್ಕೆ ಬರುವಂತೆ ಮಳೆ ನೀರು ಬೋರ್‌ವೆಲ್‌ನ ಸುತ್ತ ಶೇಖರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಶಾಲೆಯ ಯು ಆಕಾರದಲ್ಲಿ ಇದ್ದು ಇದರ ಮಧ್ಯದಲ್ಲಿ ಸಭಾಂಗಣ ಇದ್ದು, ಶಾಲೆ ಮಾಡಿನಿಂದ ಬರುವ ಮಳೆ ನೀರು ಹಾಗೂ ಸಭಾಂಗಣದ ಮೇಲ್ಭಾಗದಲ್ಲಿ ಬರುವ ಮಳೆ ನೀರನ್ನು ಉತ್ತಮ ದರ್ಜೆಯ ಶೀಟ್ ಅಳವಡಿಸಿ ಅದರ ಮೂಲಕ ಮಳೆ ನೀರನ್ನು ಶಾಲೆಯ ಕಂಪೌಂಡಿನ ಒಂದು ಬದಿಯಲ್ಲಿ ಪ್ಲಂಬಿಂಗ್ ಜಂಕ್ಷನ್ ನಿರ್ಮಾಣ ಮಾಡಿ ಅಲ್ಲಿಂದ

ಬೃಹತ್ ಪೈಪ್ ಮೂಲಕ ೪೦ ಫೀಟ್ ಆಳದಲ್ಲಿ ಜಲ್ಲಿಕಲ್ಲಿ ತುಂಬಿಸಿರುವ ಮಳೆ ನೀರು ಶೇಖರಣೆಯಾಗುವ ಗುಂಡಿಗೆ ಬರುವಂತೆ ಮಾಡಲಾಗಿದೆ. ಇದರಿಂದ ಬೋರ್‌ವೆಲ್‌ನ ಸುತ್ತಲೂ ೪೦ ಫೀಟ್ ಆಳದಲ್ಲಿ ಜಲ್ಲಿಕಲ್ಲಿನೊಂದಿಗೆ ಮಳೆ ನೀರು ಶೇಖರಣೆಯಾಗುತ್ತದೆ. ನೀರು ಶೇಖರಣೆಯಾಗುವ ಗುಂಡಿಯಲ್ಲಿ ನೀರು ಹೆಚ್ಚಾದರೆ ನೀರನ್ನು ಹೊರಭಾಗಕ್ಕೆ ಕಳಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಸೋಲಾರ್ ವ್ಯವಸ್ಥೆ : ದಾನಿಗಳ ಮೂಲಕ ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲೆಗೆ ಅಗತ್ಯವಾದ ಎಲ್ಲಾ ತರಗತಿ, ಮುಖ್ಯೋಪಾಧ್ಯಾಯರ ಕೊಠಡಿ, ಶಿಕ್ಷಕಿಯರ ಕೊಠಡಿ, ಕಂಪ್ಯೂಟರ್ ಲ್ಯಾಬ್‌ಗೆ ಫ್ಯಾನ್ ಹಾಗೂ ಲೈಟ್ ಸೋಲಾರ್ ವ್ಯವಸ್ಥೆ ಮಾಡಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಶೇಖಡಾ ನೂರು ಫಲಿತಾಂಶ ದಾಖಲಾಗಿದ್ದು, ಸರಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕುಂದುಕೊರತೆ ಬರದಂತೆ ದಾನಿಗಳು ಸಹಕರಿಸಿದ್ದು, ಕಾವಳಮೂಡೂರು, ಕಾವಳಪಡೂರು ಪರಿಸರದಲ್ಲಿ ಸರಕಾರಿ ವಗ್ಗ ಪ್ರೌಢ ಶಾಲೆ ಮಾದರಿ ಪ್ರೌಢ ಶಾಲೆಯಾಗಿ ಬೆಳೆದಿದೆ.


****************

ವಗ್ಗ ಸರಕಾರಿ ಪ್ರೌಢ ಶಾಲೆಯಲ್ಲಿ ಉತ್ತಮ ಫಲಿತಾಂಶ ಪ್ರತೀ ವರ್ಷ ಬರುತ್ತಿದೆ. ವಿದ್ಯಾರ್ಥಿಗಳಿಗಾಗಿ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್ ಇದೆ. ದಾನಿಗಳ ಸಹಕಾರದಿಂದ ಶಾಲೆಗೆ ಮಳೆ ನೀರನ್ನು ಬೋರ್‌ವೆಲ್‌ನ ಸುತ್ತ ಶೇಖರಣೆ ವ್ಯವಸ್ಥೆ ಮತ್ತು ಸೋಲಾರ್ ಲೈಟ್ಸ್‌ನ ವ್ಯವಸ್ಥೆಯನ್ನೂ ಮಾಡಲಾಗಿದೆ.

- ಆದಂ, ಮುಖ್ಯೋಪಾಧ್ಯಾಯರು, ವಗ್ಗ ಸರಕಾರಿ ಪ್ರೌಢ ಶಾಲೆ

Leave a Comment