ಮೂಡುಬಿದಿರೆ: ಡಿ.ಜೆ. ಅನುದಾನಿತ ಹಿ.ಪ್ರಾ.ಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯ, ರಂಗ ಕಲಾವಿದ ಎಚ್. ಶಾಂತಿರಾಜ ಶೆಟ್ಟಿ (91) ಅ.10ರಂದು ನಿಧನ ಹೊಂದಿದರು.
ಅವರು ಪತ್ನಿ, ಪುತ್ರರಾದ ಹವ್ಯಾಸಿ ಪತ್ರಕರ್ತ ಯತಿರಾಜ ಶೆಟ್ಟಿ, ಡಿ. ಜೆ. ವಿ.ವಿ. ಸಂಘದ ಟ್ರಸ್ಟಿ ಪ್ರಥ್ವೀರಾಜ ಶೆಟ್ಟಿ, ಛಾಯಾಗ್ರಾಹಕ ಕೀರ್ತಿ ರಾಜ್ ಶೆಟ್ಟಿ ಸಹಿತ ಕುಟುಂಬಿಕರು ಹಾಗೂ ಶಿಷ್ಯವರ್ಗವನ್ನು ಆಗಲಿದ್ದಾರೆ.
ಬೆಳ್ತಂಗಡಿ ಎಳನೀರು ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಶಾಂತಿರಾಜರು ಬಳಿಕ ಡಿ.ಜೆ. ವಿ.ವಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಒಟ್ಟು ಮೂರುವರೆ ದಶಕಗಳಿಗೂ ಮಿಕ್ಕಿದ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಬೋಧಕ ತಜ್ಞರಾಗಿ ಉತ್ತಮ ಶೈಕ್ಷಣಿಕ ಆಡಳಿತಗಾರರಾಗಿ ಸರಳ ಸಜ್ಜನಿಕೆಯಿಂದ ಗಮನ ಸೆಳೆದಿದ್ದರು. ಎರಡೆರಡು ಬಾರಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅವಕಾಶವಿದ್ದರೂ ಅರ್ಜಿ ಹಾಕಿ
ಪ್ರಶಸ್ತಿ ಬೇಡವೆಂದು ಯಾವುದೇ ಸಮ್ಮಾನ ಗೌರವಗಳಿಂದ ಅಂತರ ಕಾಯ್ದುಕೊಂಡಿದ್ದರು. ಅರುವತ್ತರ ದಶಕದಲ್ಲಿ
ಮೂಡುಬಿದಿರೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ವಾಸುದೇವ ರಾವ್, ಎಂ ಎಸ್.ಜೀವನ್, ವಾಸು ಸಾಲಿಯಾನ್ ಮೊದಲಾದವರ ಉತ್ಸಾಹದಲ್ಲಿ ರೂಪುಗೊಂಡಿದ್ದ ನೂತನ ಕಲಾವೃಂದದ ನಾಟಕಗಳಲ್ಲಿಯೂ ಅವರು ನಟರಾಗಿ ಸಕ್ರಿಯರಾಗಿದ್ದರು.
ಮೃತರ ಗೌರವಾರ್ಥ ಡಿ.ಜೆ. ಶಾಲೆಗೆ ರಜೆ ಘೋಷಿಸಲಾಗಿತ್ತು. ಶಾಲಾ ಸಂಚಾಲಕ ಹೇಮರಾಜ್, ಮಾಜಿ ಸಚಿವ ಅಭಯಚಂದ್ರ, ಡಾ ಮೋಹನ ಆಳ್ವ, ''ಮೂಡ'' ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಅರಳ ರಾಜೇಂದ್ರ ಶೆಟ್ಟಿ, ಎಂ. ಬಾಹುಬಲಿ ಪ್ರಸಾದ್, ಚೌಟರ ಅರಮನೆ ಕುಲ ದೀಪ ಎಂ., ಶ್ವೇತಾ ಜೈನ್ ಸಹಿತ ಗಣ್ಯರು ಮೃತರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.














