ಬಂಟ್ವಾಳ :ವಿದ್ಯಾರ್ಥಿಗಳಿಗೆಗಳಿಗೆ, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ನಾಯಕತ್ವದ ಗುಣಗಳು , ದೈಹಿಕ ಸದೃಢತೆ ಮತ್ತು ಪರಿಶ್ರಮದ ಮನೋಭಾವನೆಯನ್ನು ಅಭಿವೃದ್ಧಿಪಡಿಸಲು ಸಹಾಯಮಾಡುತ್ತದೆ. ಕ್ರೀಡೆ ವಿದ್ಯಾರ್ಥಿಗಳಲ್ಲಿ ಬದುಕಿನಲ್ಲಿ ಬರಬಹುದಾದ ಸವಾಲನ್ನು ಎದುರಿಸುವ ಆತ್ಮಸ್ಥೈರ್ಯವನ್ನು ತಂದುಕೊಡುತ್ತದೆ ಎಂದು ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಆಶಾ ನಾಯಕ್ ಹೇಳಿದರು.
ಅವರು ತುಂಬೆ ವಿದ್ಯಾಸಂಸ್ಥೆಯ ಡಾ. ಬಿ. ಅಹಮ್ಮದ್ ಹಾಜಿ ಮುಹಿಯುದ್ದೀನ್ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ದ ಕ ಹಾಗೂ ತುಂಬೆ ಪದವಿಪೂರ್ವ ಕಾಲೇಜು ಮತ್ತು ತುಂಬೆ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ 14ರ ವಯೋಮಿತಿಯ ಬಾಲಕರ ಹಾಗೂ ಪದವಿಪೂರ್ವ ಕಾಲೇಜು ವಿಭಾಗದ ಬಾಲಕರ ಫುಟ್‌ಬಾಲ್ ಪಂದ್ಯಾಟವನ್ನು ಉದ್ಘಾಟಸಿ ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಬೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಜಯಂತಿ ಕೇಶವ ಇವರು ಕ್ರೀಡಾಕೂಟಕ್ಕೆ ಶುಭವನ್ನು ಹಾರೈಸಿದರು.
ಅತಿಥಿ ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಇಲ್ಲಿನ ಪ್ರಾಂಶುಪಾಲರಾದ ಕವಿತಾ ಕೆ ಇವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಅತ್ಯಂತ ಅಗತ್ಯ. ಎಲೆ ಮರೆ ಕಾಯಿಯಂತಿರುವ ಅದೆಷ್ಟೋ ಕ್ರೀಡಾ ಪ್ರತಿಭೆಗಳಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಮತ್ತು ಸರಿಯಾದ ವೇದಿಕೆ ದೊರೆತಾಗ ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳುವ ಮೂಲಕ ಕ್ರೀಡಾ ಕೂಟಕ್ಕೆ ಹಾಗೂ ಎಲ್ಲ ಕ್ರೀಡಾಪಟುಗಳಿಗೆ ಶುಭವನ್ನು ಕೋರಿದರು.
ಕಾರ್ಯಕ್ರಮದಲ್ಲಿ ತುಂಬೆ ವಿದ್ಯಾಸಂಸ್ಥೆಯ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ನಿಸಾರ್ ಅಹಮ್ಮದ್ ವಳವೂರ್‌ವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ನಮ್ಮನ್ನು ಗುರುತಿಸಿಕೊಳ್ಳಬೇಕಾದರೆ ಕಠಿಣ ಪರಿಶ್ರಮ ಅತ್ಯಗತ್ಯ. ಹಾಗಾಗಿ ವಿದ್ಯಾರ್ಥಿಗಳಾದ ನೀವು ಎಳವೆಯಲ್ಲಿ ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಅತ್ಯಂತ ಅವಶ್ಯ. ಈ ನಿಟ್ಟಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ
ಅದೆಷ್ಟೋ ಮಹನೀಯರನ್ನು ಜಗತ್ತು ಕೊಂಡಾಡುತ್ತದೆ. ಹಾಗಾಗಿ ಮುಂದೊಂದು ದಿನ ನೀವು ಕ್ರೀಡೆಯಲ್ಲಿ ಇಂತಹ ಸಾಧನೆ ಮಾಡಿದಾಗ ಆಗ ಜಗತ್ತು ನಿಮ್ಮನ್ನು ಕೊಂಡಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಮ್ಮ ಭಾಷಣದ ಮೂಲಕ ಕ್ರೀಡಾ ಮಹತ್ವವನ್ನು ಹೇಳಿದರು.
ಫುಟ್ ಬಾಲ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಮ್ಯಾಕ್ಸಿಮ್ ಕುವೆಲ್ಲೊ ಹಾಗೆಯೇ ಅರ್ಷದ್ ವಳವೂರು, ಇಮ್ತಿಯಾಝ್, ಶರೀಫ್, ಚಂಚಲಾಕ್ಷಿ ಹಾಗೂ ಪಂಚಾಯತ್ ಸದಸ್ಯರಾದ ಅಬ್ದುಲ್ ಅಝೀಝ್ ರೌಫ್ ಮತ್ತು ಇಬ್ರಾಹಿಂ ವಳವೂರು. ತುಂಬೆ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಕಿಶೋರ್ ಸುವರ್ಣ ಮತ್ತು ತುಂಬೆ ಪದವಿಪೂರ್ವ ವಿಭಾಗದ ರಾಜ್ಯಶಾಸ್ತ್ರ ಉಪನ್ಯಾಸಕರಾದ ದಿನೇಶ್ ಶೆಟ್ಟಿ ಅಳಿಕೆ, ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ವಿದ್ಯಾ ಕೆ. ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಮಲ್ಲಿಕಾ ಶೆಟ್ಟಿ, ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿಯವರಾದ ಮೋಲಿ ಎಡ್ನ ಗೋನ್ಸಾಲ್ವಿಸ್ ಹಾಗೂ ಬೆಂಜನಪದವು ಕಾಲೇಜಿನ ಉಪನ್ಯಾಸಕರಾದ ಮೇದಪ್ಪ ಹಾಗೂ ಕ್ರೀಡಾ ತರಬೇತುದಾರರಾದ ಅಬ್ದುಲ್ ಗಫೂರ್ ಮತ್ತು ಎಲ್ಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರು , ಟೀಮ್ ಮ್ಯಾನೇಜರ್, ಅಧ್ಯಾಪಕ ಅಧ್ಯಾಪಕೇತರ ಬಂಧುಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಯ ಪ್ರಾಚಾರ್ಯರು ವಿ. ಸುಬ್ರಹ್ಮಣ್ಯ ಭಟ್ ಇವರು ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಸಾಯಿರಾಮ್ ಜೆ ನಾಯಕ್ ಇವರು ವಂದಿಸಿದರು. ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ರೈ ಇವರು ಪ್ರಾಸ್ತಾವಿಕ ಮಾತುಗಳ ಮೂಲಕ ಕಾರ್ಯಕ್ರಮ ನಿರ್ವಹಿಸಿದರು.














