Coastal Bulletin

ಮಂಗಳೂರು : ಮೇ 14ರಿಂದ 25ರವರೆಗೆ ಜರಗಲಿರುವ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಆಡಳಿತ್ಕೊಳಪಟ್ಟ ಮಂಗಳೂರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೇ 14 ರಂದು ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮದ ಬೃಹತ್ ವೈಭವದ ಶೋಭಾಯಾತ್ರೆಗೆ ಭರದ ಸಿದ್ದತೆ ನಡೆಯುತ್ತಿದೆ

ಮೇ 14 ರಂದು ಸಂಜೆ 3-30ರಿಂದ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಮಲ್ಲಿಕಟ್ಟೆ-ನಂತೂರು ಜಂಕ್ಷನ್ ಮೂಲಕ ಶ್ರೀ ಕ್ಷೇತ್ರಕ್ಕೆ ಭವ್ಯ ಮೆರವಣಿಗೆಯಲ್ಲಿ ಹಸಿರುವಾಣಿ ಹೊರೆಕಾಣಿಕೆಯ ಮೆರವಣಿಗೆ ಸಾಗಿ ಬರಲಿದೆ. ಆಕರ್ಷಕ ಟ್ಯಾಬ್ಲೋಗಳು, ಚೆಂಡೆ ವಾದಕಗಳು, ಅತ್ಯಾಕರ್ಷಕ ಬರ್ಕೆ ಹುಲಿವೇಷ, ಕುಣಿತ ಭಜನೆ, ಗೊಂಬೆಕುಣಿತ, ತಾಲೀಮು ಮೆರವಣಿಗೆಗೆ ಮೆರುಗು ನೀಡಲಿದೆ. ಚುನಾವಣೆಯ ಹಬ್ಬ ಮುಗಿದ ಮರುದಿನವೇ ನಮ್ಮ ಕುಲಶೇಖರದ ಧಾರ್ಮಿಕ ಹಬ್ಬ ಕಾವು ಪಡೆಯಲಿದೆ.

ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶಕರು ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ಪಾವನಸಾನಿಧ್ಯದಲ್ಲಿ ಹೊರೆಕಾಣಕೆ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಹಲವು ಅತಿಥಿ ಗಣ್ಯರು, ಅವಿಭಜಿತ ಜಿಲ್ಲೆಯ ಕುಲಾಲ ಬಾಂಧವರು, ನಾಡಿನ ಸಮಸ್ತ ಭಕ್ತರು ಮಾತ್ರವಲ್ಲದೆ ಮುಂಬೈ, ಪೂನಾ, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಭಕ್ತಾಧಿಗಳು ಮೆರವಣಿಗೆಯಲ್ಲಿ ಪಾಲು ಪಡೆಯಲಿದ್ದಾರೆ.

ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದೆ. ಹೊರೆಕಾಣಿಕೆ ಮೆರವಣಿಗೆಯ ಜವಾಬ್ದಾರಿಯನ್ನು ಪ್ರಧಾನ ಸಂಚಾಲಕ ಕೆ. ಸುಂದರ ಕುಲಾಲ್ ಶಕ್ತಿನಗರ, ಸಂಚಾಲಕರಾದ ಕಿರಣ್ ಅಟ್ಲೂರು, ಸಹ ಸಂಚಾಲಕರು ಹಾಗೂ ಸದಸ್ಯರು ವಹಿಸಿಕೊಳ್ಳಲಿದ್ದಾರೆ, ಕುಲಾಲ ಸಮುದಾಯದ ಕುಲದೇವರಾಗಿರುವ ಶ್ರೀ ವೀರನಾರಾಯಣ ದೇವರ ಬ್ರಹ್ಮಕಲಶಕ್ಕೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಜಿಲ್ಲಾಧ್ಯಕ್ಷ, ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷರಾದ ಮಯೂರ್ ಉಳ್ಳಾಲ್ ಹಾಗೂ ವೀರನಾರಾಯಣ ಸೇವಾ ಟ್ರಸ್ಟ್ ಹಾಗೂ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ

ಪ್ರೇಮಾನಂದ ಕುಲಾಲ್ ತಿಳಿಸಿದ್ದಾರೆ.

ರಾಜ್ಯದ ವಿವಿಧ ಕಡೆಗಳಿಂದ ಹೊರೆಕಾಣಿಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹೊರೆಕಾಣಿಕೆ ಸಮರ್ಪಿಸಲಿದ್ದಾರೆ. ಹೀಗಾಗಿ ವಿವಿಧ ಭಾಗಗಳಿಂದ ಬರುವ ಹೊರೆಕಾಣಿಕೆಯನ್ನು ಬಂಟ್ವಾಳ ಕುಲಾಲ ಸಂಘ, ಸುರತ್ಕಲ್ ಕುಲಾಲ ಸಂಘ, ಕೊಲ್ಯ ಕುಲಾಲ ಸಂಘಗಳಲ್ಲಿ ಒಟ್ಟುಗೂಡಿಸಿ ಅಲ್ಲಿಂದ ಏಕಕಾಲದಲ್ಲಿ ನಂತೂರು ಜಂಕ್ಷನ್ ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪುವ ಯೋಜನೆಯನ್ನು ಬ್ರಹ್ಮಕಲಶ ಸಮಿತಿ ಹಾಕಿಕೊಂಡಿದೆ. ಹೊರೆಕಾಣಿಕೆಯೊಂದಿಗೆ ಬರುವ ಭಕ್ತರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಹಾಗೂ ಪಾನಿಯಾವನ್ನು ಸಂಘದ ವಠಾರದಲ್ಲಿ ಮಾಡಲಾಗಿದೆ. ಹಾಗಾದರೆ ಯಾವ ಯಾವ ಭಾಗಗಳಿಂದ ಹೊರೆಕಾಣಿಕೆಯನ್ನು ಎಲ್ಲಿ ಒಟ್ಟುಗೂಡಿಸಲಾಗುತ್ತದೆ ಅನ್ನುವ ಚಿತ್ರಣವನ್ನು ಇಲ್ಲಿ ನೀಡಲಾಗಿದೆ.

ಸುರತ್ಕಲ್ ಕುಲಾಲ ಭವನ

ಹೆಬ್ರಿ, ಕುಂದಾಪುರ, ಉಡುಪಿ, ಕಾರ್ಕಳ, ಮೂಲ್ಕಿ, ಪಡುಬಿದ್ರಿ ಮುಂತಾದ ಭಾಗಗಳಿಂದ ಸುರತ್ಕಲ್ ತಡಂಬೈಲ್‌ನಲ್ಲಿರುವ ಕುಲಾಲ ಭವನಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪುವಂತೆ ಕಾರ್ಯಯೋಜನೆ ರೂಪಿಸಲಾಗಿದೆ. 4 ಗಂಟೆಗೆ ಜಂಕ್ಷನ್‌ನಿಂದ ಹೊರಟು  ನಂತೂರು ಜಂಕ್ಷನ್ ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪುವ ಯೋಜನೆ ರೂಪಿಸಲಾಗಿದೆ.

ಬಂಟ್ವಾಳ ಕುಲಾಲ ಭವನ

ಮಡಿಕೇರಿ, ಚಿಕ್ಕಮಗಳೂರು, ಬೆಳ್ತಂಗಡಿ, ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಕಡಬ ಇನ್ನಿತ್ತರ ಭಾಗಗಳಿಂದ ಬರುವ ಹೊರೆಕಾಣಿಕೆಯು ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ ಕುಲಾಲ ಭವನದ ವಠಾರಕ್ಕೆ ತಲುಪಬೇಕಿದೆ. ಅಲ್ಲಿಂದ 4 ಗಂಟೆಗೆ ಪಂಪ್‌ವೆಲ್ ತಲುಪಿ ನಂತೂರು ಜಂಕ್ಷನ್ ಮೂಲಕ ಮೆರವಣಿಗೆ ಶ್ರೀ ಕ್ಷೇತ್ರಕ್ಕೆ ತಲುಪಲಿದೆ.

ಕೊಲ್ಯ ಕುಲಾಲ ಭವನ

ಕಾಸರಗೋಡು, ಮಂಜೇಶ್ವರ, ಪೈವಳಿಕೆ, ಮುಡಿಪು, ಇರಾ, ಮಂಚಿ, ದೇರಳಕಟ್ಟೆ ಮುಂತಾದ ಕಡೆಗಳಿಂದ ಹೊರೆಕಾಣಿಕೆಯು ಕೊಲ್ಯ ಕುಲಾಲ ಭವನಕ್ಕೆ  ಮಧ್ಯಾಹ್ನ 2 ಗಂಟೆ ತಲುಪಿ ಅಲ್ಲಿ 4 ಗಂಟೆಗೆ ಅಲ್ಲಿಂದ ಪಂಪ್‌ವೆಲ್ ಮೂಲಕ ನಂತೂರು ಜಂಕ್ಷನ್‌ಗೆ ತಲುಪಲಿದೆ.

Leave a Comment