ಬಡಗಬೆಳ್ಳೂರು: ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ. ಫೆ.18ರಿಂದ ಬ್ರಹ್ಮಕಲಶೋತ್ಸವ ಸಂಭ್ರಮ. ಫೆ.15ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ.

Coastal Bulletin
ಬಡಗಬೆಳ್ಳೂರು: ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ. ಫೆ.18ರಿಂದ ಬ್ರಹ್ಮಕಲಶೋತ್ಸವ ಸಂಭ್ರಮ. ಫೆ.15ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ.

ಬಂಟ್ವಾಳ:ತಾಲೂಕಿನ ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನವು ರೂ 1.25 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿದ್ದು, ನೂತನ ಶೀಲಾಮಯ ದೇವಸ್ಥಾನದಲ್ಲಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಫೆ.18ರಿಂದ 22ರತನಕ ವೈದಿಕ, ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.


ಇಲ್ಲಿನ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 80 ವರ್ಷಗಳ ಹಿಂದೆ ದಿವಂಗತ ಸದಾಶಿವ ಎಂ.ಕರ್ಕೇರ ಎಂಬವರು ಆರಂಭಿಸಿದ್ದ ಈ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಸೇರಿದಂತೆ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಣವಾಗಿ ಬೆಳೆದು ಬಂದಿದೆ. ಇದೀಗ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಮತ್ತು ಎಡಪದವು ವಿಷ್ಣುಮೂರ್ತಿ ತಂತ್ರಿ ಮಾರ್ಗದರ್ಶನದಲ್ಲಿ ದೇವಸ್ಥಾನ ಪುನರ್ ನಿರ್ಮಾಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿದೆ ಎಂದರು.

ಪ್ರತಿದಿನ ಸಂಜೆ ಭಜನೆ ಸಹಿತ ನಾಟಕ, ಭರತನಾಟ್ಯ, ನೃತ್ಯ ವೈವಿಧ್ಯ, ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಫೆ.22ರಂದು ಬೆಳಿಗ್ಗೆ ಗಂಟೆ 7.41ರ ಸುಮುಹೂರ್ತದಲ್ಲಿ ದೇವರ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಫೆ.19ರಿಂದ 22ರತನಕ ಧಾರ್ಮಿಕ ಸಭೆಯಲ್ಲಿ ವಿವಿಧ ಸ್ವಾಮೀಜಿ ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ವೇಳೆ

ಪರಿವಾರ ದೈವಗಳಾದ ರಕ್ತೇಶ್ವರಿ, ಪಂಜುರ್ಲಿ, ಚಾಮುಂಡಿ ಗುಳಿಗ ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನಡೆಯಲಿದೆ ಎಂದು ಅವರು ವಿವರಿಸಿದರು. 

ಫೆ.15ರಂದು ಹೊರೆಕಾಣಿಕೆ ಮೆರವಣಿಗೆ:

ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪಾಡಿ ಮಾತನಾಡಿ, ಫೆ.15ರಂದು ಮಧ್ಯಾಹ್ನ 2 ಗಂಟೆಗೆ ಪೊಳಲಿ ಕ್ಷೇತ್ರ, ಬೆಂಜನಪದವು, ಕಲ್ಪನೆ ಮತ್ತಿತರ ಕಡೆಗಳಿಂದ ಸಾಗಿ ಬಂದ ಹಸಿರುವಾಣಿ ಹೊರೆಕಾಣಿಕೆ ಇಲ್ಲಿನ ಕಾವೇಶ್ವರ ದೇವಸ್ಥಾನದಿಂದ ಆಕರ್ಷಕ ಮೆರವಣಿಗೆಯೊಂದಿಗೆ ದೇವಳಕ್ಕೆ ಬರಲಿದೆ' ಎಂದರು. 

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ ಮಾತನಾಡಿ, ' ಈ ದೇವಳವು ದಾನಿಗಳ ದೇಣಿಗೆ ಜೊತೆಗೆ ಸ್ಥಳೀಯ ಅಪಾರ ಮಂದಿ ಭಕ್ತರ ಶ್ರಮದಾನದ ಮೂಲಕ ಎದ್ದು ನಿಂತಿದೆ, ಗ್ರಾಮೀಣ ಭಾಗವಾದ ಇಲ್ಲಿ ಪ್ರತಿದಿನ ನೂರಾರು ಕರಸೇವಕರ ಶ್ರಮದಾನದ ಮೂಲಕ ದೇವಸ್ಥಾನದ ಕೆಲಸ ಭರದಿಂದ ಸಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಉಮೇಶ ಸಾಲ್ಯಾನ್ ಬೆಂಜನಪದವು, ಟ್ರಸ್ಟಿ ವಸಂತ ಎಂ, ಶಶಿಕಿರಣ್, ದಿನೇಶ್, ವಾಮನ ಪೂಜಾರಿ ಉಪಸ್ಥಿತರಿದ್ದರು.

Leave a Comment