Coastal Bulletin

ಬಂಟ್ವಾಳ ; ಸೆ.05: ಮನುಷ್ಯನ ಅತಿಭೋಗ ಮನಸ್ಥಿತಿಯಿಂದಾಗಿ ಪರಿಸರದ ಮೇಲೆ ತೀವ್ರವಾದ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿದೆ.ಪರಿಸರಕ್ಕೆ ಹಾನಿಯಾಗದಂತೆ ಬದುಕುವ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಕಡ್ಕ ಹೇಳಿದರು.

ಅವರು ಕಲ್ಕಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಪರ್ಯಾವರಣ ಸಂರಕ್ಷಣಾ ಗತಿವಿಧಿ ಆಯೋಜಿಸಿದ್ದ "ಪರಿಸರ ಸ್ನೇಹಿ ವಿದ್ಯಾಲಯ" ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾ ಸಂಸ್ಥೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರ. ಸಮಾಜದಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಬೇಕಾದರೆ ಶಿಕ್ಷಕರ ಮತ್ತು ಶಿಕ್ಷಣದ ಪಾತ್ರ ಬಹಳ ಮಹತ್ವದ್ದು, ಅದು ಪರಿಸರ ಸಂರಕ್ಷಣೆ ವಿಷಯಕ್ಕೂ ಸಹ ಅನ್ವಯಿಸುತ್ತದೆ ಎಂದು ಹೇಳಿದರು. ಜಲವನ್ನು ತೀರ್ಥ ರೂಪದಲ್ಲಿ ಹಿತಮಿತವಾಗಿ ಬಳಸಬೇಕು. ಅಪವ್ಯಯ ಸಲ್ಲದು. ನಮಗೆ ಸರ್ವವನ್ನೂ ಕೊಟ್ಟಿರುವ ಭೂಮಿ, ಮಾತೃ ಭೂಮಿ ರಕ್ಷಣೆ ನಮ್ಮ ಧ್ಯೇಯವಾಗಬೇಕು ಎಂದು ಹೇಳಿದರು.

ಪರ್ಯಾವರಣ ಸಂರಕ್ಷಣಾ

ಗತಿವಿಧಿಯ ಸಂಯೋಜಕರಾದ ಶ್ರೀ ವೆಂಕಟೇಶ ಸಂಗನಾಳ ಮತ್ತು ಶ್ರೀ ನರಸಿಂಹ ಪ್ರಸಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀರಾಮ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ತಮ್ಮ ವಿದ್ಯಾಸಂಸ್ಥೆಯಲ್ಲಿ ಅಳವಡಿಸಿಕೊಂಡಿರುವ ಪರಿಸರ ಸ್ನೇಹಿ ಅಂಶ ಮಳೆ ನೀರು ಸಂಗ್ರಹ, ಇಂಗುಗುಂಡಿ ವ್ಯವಸ್ಥೆ, ಸೋಲಾರ ಅಳವಡಿಕೆ ,ಕದಂಬವನಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯದ ವಿವಿಧ ಭಾಗಗಳಿಂದ 120ಕ್ಕೂ ಅಧಿಕ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತಮ್ಮ ಶಾಲೆಗಳಲ್ಲಿ ಪರಿಸರ ಸ್ನೇಹಿ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಮತಿಸಿದರು. ಶ್ರೀ ಅರುಣ ಕುಮಾರ ಸ್ವಾಗತಿಸಿದರು. ಕುಮಾರಿ ಗಾಯತ್ರಿ ಪ್ರಾರ್ಥಿಸಿದರು. ಶ್ರೀ ಚಂದ್ರಹಾಸ ಪಿ. ಕಾರ್ಯಕ್ರಮ ನಿರ್ವಹಿಸಿದರು.

Leave a Comment