ಬಂಟ್ವಾಳ: ಇಲ್ಲಿನ ನಾವೂರು ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಇವರ ಪುತ್ರಿ ಅಶ್ರಾ (11) ಮತ್ತು ಇಲಿಯಾಸ್ ಇವರ ಪುತ್ರಿ ಮರಿಯಮ್ಮ ನಾಶಿಯಾ (14 ) ಮೃತ ಬಾಲಕಿಯರು.
ಮೂಲತಃ ನಾವೂರು ನಿವಾಸಿ ಆಗಿರುವ ಇಲಿಯಾಸ್ ಅವರು ಉಳ್ಳಾಲದಲ್ಲಿ ವಾಸವಾಗಿದ್ದು, ಇಲ್ಲಿನ ನಾವೂರು ಸಮೀಪದ ಮೈಂದಾಳದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮನೆಯವರೊಂದಿಗೆ ಭಾನುವಾರ ಸಂಜೆ ಮಕ್ಕಳು ಸ್ಥಳೀಯ ನೀರಕಟ್ಟೆ
ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿ ಆಟವಾಡುತ್ತಿದ್ದರು.ಇದೇ ವೇಳೆ ಮಕ್ಕಳು ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಪೋಷಕರು ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.ಬಂಟ್ವಾಳ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.









