ಬಂಟ್ವಾಳ: ನಮ್ಮ ಆರೋಗ್ಯದ ರಕ್ಷಣೆ ನಮ್ಮ ಕೈಯಲ್ಲಿಯೇ ಇದೆ, ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಿಕೊಂಡು ಔಷಧಿಯೊಂದಿಗೆ ಪೌಷ್ಠಿಕಾಂಶದ ಆಹಾರ ಸೇವಿಸಿದಾಗ ಕ್ಷಯ ರೋಗವನ್ನು ವಾಸಿ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠದ ಶ್ರೀ ಜಿತಕಾಮನಂದ ಸ್ವಾಮೀಜಿ ಹೇಳಿದರು. ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ದ ಕಿಟ್ ವಿತರಿಸಿ ಮಾತನಾಡಿದರು.
ಸೇವಾಂಜಲಿಯ ಸೇವಾ ಕಾರ್ಯ ನಿಜವಾಗಿಯೂ ದೇವರ ಪೂಜೆ. ಜನರ ಸೇವೆ ಮಾಡುವ ಸೇವಾಂಜಲಿಯ ಕಾರ್ಯ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಪ್ಪು ಶ್ರೀ ಅಂಬಾ ಮಹೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ಎ. ಮಾತನಾಡಿ ಕ್ಷಯ ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸೇವಾಂಜಲಿಯ ಈ ಕಾರ್ಯದೊಂದಿಗೆ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಈವರೆಗೆ 217 ಮಂದಿ ರೋಗಿಗಳಿಗೆ ಆರು ಸಾವಿರದಂತೆ ಒಟ್ಟು 13 ಲಕ್ಷಕ್ಕೂ ಮಿಕ್ಕಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ನಿವೃತ್ತ ಅಬಕಾರಿ ಅಧಿಕಾರಿ ಎಂ.ಆರ್ ನಾಯರ್, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಕ್ಷಯ ರೋಗದ ಸಂಶೋಧನಾ ವಿದ್ಯಾರ್ಥಿ ಡಾ. ಬಿಲಾಲ್ ಪಾಷ ಉಪಸ್ಥಿತರಿದ್ದರು.
ಪ್ರಮುಖರಾದ ನಾರಾಯಣ ಬಡ್ಡೂರು,ಭಾಸ್ಕರ್ ಚೌಟ ಕುಮ್ಡೇಲ್, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ,ಸಾರಮ್ಮ, ಉಮಾ ಚಂದ್ರಶೇಖರ್, ವಿದ್ಯಾ ಸುಜೀರ್ ಆಶಾಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.














