ಪೈಪ್‌ಲೈನ್ ಕಾಮಗಾರಿ ; ಡಾಮಾರ್ ರಸ್ತೆ ಡಮಾರ್ ಸಾವಿರಾರು ವಿದ್ಯಾರ್ಥಿಗಳಿಗೆ ನಡೆದಾಡಲು ಸಂಕಷ್ಟ

Coastal Bulletin
ಪೈಪ್‌ಲೈನ್ ಕಾಮಗಾರಿ ; ಡಾಮಾರ್ ರಸ್ತೆ ಡಮಾರ್ ಸಾವಿರಾರು ವಿದ್ಯಾರ್ಥಿಗಳಿಗೆ ನಡೆದಾಡಲು ಸಂಕಷ್ಟ

ಬಿ.ಸಿ.ರೋಡ್ : ಡಾಮಾರ್ ರಸ್ತೆಯನ್ನೇ ಕತ್ತರಿಸಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಮಾಡಿರುವುದರಿಂದ ರಸ್ತೆಗೆ ಹಾನಿ, ಮಳೆ ನೀರು ಹಾದು ಹೋಗುವ ಚರಂಡಿಗೂ ಹಾನಿ.. ಅಷ್ಟೇ ಅಲ್ಲದೇ ಸಾವಿರಾರು ವಿದ್ಯಾರ್ಥಿಗಳು ಈ ರಸ್ತೆ ಬದಿಯಲ್ಲಿ ನಡೆದಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಕಂಬ - ಪೊಳಲಿ ರಸ್ತೆಯಾದ ಬಂಟುಗುರಿಯಿಂದ ಮೊಡಂಕಾಪು ವರೆಗೆ ಸುಮಾರು ಒಂದೂವರೆ ಕಿಲೋ ಮೀಟರ್ ಅಂತರದಲ್ಲಿರುವ ರಸ್ತೆಯು ಅಪಾಯವನ್ನು ಆಹ್ವಾನಿಸುತ್ತಿದೆ.

ಕರ್ನಾಟಕ ಹರ್ಬನ್ ವಾಟರ್ ಸಪ್ಲೈ ಹಾಗೂ ಒಳಚರಂಡಿ ಇಲಾಖೆಯ ವತಿಯಿಂದ ನಡೆಯುವ ಅಮೃತ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಆರಂಭವಾಗಿದೆ. ೨೦೧೯ರಲ್ಲಿ ಇದೇ ರಸ್ತೆಯ ಎಡಬದಿಗೆ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಅಳವಡಿಸುವ ಸಂದರ್ಭ ರಸ್ತೆಗೆ ಹಾನಿಯಾಗಿತ್ತು. ಇದೀಗ ಅದೇ ರಸ್ತೆಯ ಬಲಬದಿಯಲ್ಲಿ ಕಳೆದ ಹತ್ತು ದಿನಗಳಿಂದ ಪೈಪ್‌ಲೈನ್ ಕಾಮಗಾರಿಯು ಆರಂಭವಾಗಿದೆ. ಕೈಕಂಬದಲ್ಲಿರುವ ಕುರ್ಸುಗುಡ್ಡೆ ಟ್ಯಾಂಕ್‌ನಿಂದ ಮೊಡಂಕಾಪು, ಬಂಟುಗುರಿ, ರಾಜೀವಪಳಿಕೆ ಪರಿಸರದವರಿಗೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಲು ಮತ್ತೆ ಹೊಂಡ ತೋಡಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಇದಾಗಿದೆ. ಆದರೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದರೂ ಪೈಪ್‌ಲೈನ್‌ಗಾಗಿ ತೋಡಿದ ಹೊಂಡದ ಕಲ್ಲುಗಳೆಲ್ಲಾ ರಸ್ತೆಯಲ್ಲೇ ರಾಶಿ ರಾಶಿಯಾಗಿದ್ದು ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗಿದೆ.

ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ : ಮೊಡಂಕಾಪು ಪರಿಸರದಲ್ಲಿ ದೀಪಿಕಾ ಪ್ರೌಢ ಶಾಲೆ, ಕಾರ್ಮೆಲ್ ಪ್ರೌಢ ಶಾಲೆ, ಕಾರ್ಮೆಲ್ ಪದವಿಪೂರ್ವ ಕಾಲೇಜು, ಕಾರ್ಮೆಲ್ ಪದವಿ ಕಾಲೇಜು, ಇನ್ಫೆಂಟ್ ಜೀಸಸ್ ಪ್ರಾಥಮಿಕ ಶಾಲೆ, ಪೌಢ ಶಾಲೆ, ಇನ್ಫೆಂಟ್ ಜೀಸಸ್ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹೀಗೆ ಹಲವಾರು ವಿದ್ಯಾಸಂಸ್ಥೆಗಳಿಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಹಾಗೂ ನೂರಾರು ಶಿಕ್ಷಕರು ಬರುತ್ತಿದ್ದು, ಎಲ್ಲರೂ ಈ ಒಡೆದು ಹಾಕಿದ ಡಾಮರ್ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ರಸ್ತೆ ಹಾಳುಗೆಡವಿದ್ದರಿಂದ ವಾಹನ ಸವಾರರು ಅವರ ಭದ್ರತೆಯನ್ನು ನೋಡಿದರೆ ರಸ್ತೆಬದಿ ನಡೆದುಕೊಂಡು ಹೋಗುವವರು ನರಕಯಾತನೆ ಪಡುತ್ತಿದ್ದಾರೆ.

ಯಾವುದೇ ಕಾಮಗಾರಿ ಆರಂಭ ಮಾಡುವಾಗ ಜನಪ್ರತಿನಿಧಿಗಳು ಖುದ್ದಾಗಿ ಬಂದು ಕಾಮಗಾರಿಯನ್ನು ವೀಕ್ಷಿಸಬೇಕು. ಅಧಿಕಾರಿಗಳು ಕಾಮಗಾರಿ ಸಮಯದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತುಂಬಾ ಎಚ್ಚರಿಕೆಯಿಂದ, ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಮಾಡಬೇಕು. ಪ್ರತಿಯೊಂದು ಇಲಾಖೆಯೂ ಪರಸ್ಪರ ಸಂವಹನ ಮಾಡಿ ಒಂದು ಕಾಮಗಾರಿಯಿಂದ ಇನ್ನೊಂದು ಕಾಮಗಾರಿಗೆ ತೊಂದರೆಯಾಗದಂತೆ ಕೆಲಸi ಕೈಗೊಳ್ಳಬೇಕು. ಆಗ

ಮಾತ್ರ ಕಾಮಗಾರಿಯೂ ಒಳ್ಳೆಯದಾಗಿ ನಡೆಯುತ್ತದೆ. ಇದರಿಂದ ಸಾರ್ವಜನಿಕರು ನಿಟ್ಟುಸಿರುಬಿಟ್ಟು ರಸ್ತೆಯಲ್ಲಿ ಸಂಚಾರ ಮಾಡಬಹುದು. ಇಲ್ಲವಾದಲ್ಲಿ ವರ್ಷಂಪ್ರತಿ ರಸ್ತೆಗೆ ಡಾಮರು ಹಾಕುವುದು ಮಳೆಗಾಲ ಕಳೆದ ಮೇಲೆ ಅದನ್ನು ಒಡೆದು ಹಾಕುವುದು. ಇದರಿಂದಾಗಿ ಸಾರ್ವಜನಿಕರಿಗೆ ಅನುಕೂಲವಾಗುವುದರ ಬದಲು ಸಮಸ್ಯೆಯೇ ಜಾಸ್ತಿಯಾಗುತ್ತದೆ.

*********

ಕಳೆದ ಹತ್ತು ದಿನಗಳ ಹಿಂದೆ ಬಂಟ್ವಾಳ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ಬಿ.ಸಿ.ರೋಡು - ಪೊಳಲಿ ರಸ್ತೆಯಲ್ಲಿ ಬಂಟುಗುರಿಯಿಂದ ಮೊಡಂಕಾಪು ವರೆಗೆ ಸುಮಾರು ಒಂದೂವರೆ ಕಿಲೋ ಮೀಟರ್‌ನಷ್ಟು ಅಂತರದಲ್ಲಿ ಕರ್ನಾಟಕ ಹರ್ಬನ್ ವಾಟರ್ ಸಪ್ಲೈ ಹಾಗೂ ಒಳಚರಂಡಿ ಇಲಾಖೆಯು ಯಾವುದೇ ಅನುಮತಿ ಪಡೆಯದೇ ಡಾಮರ್‌ರಸ್ತೆಗೆ ಹಾನಿ ಮಾಡಿ ಕಾಮಗಾರಿ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿರುವುದರಿಂದ ಕಾಮಗಾರಿಯನ್ನು ಮುಂದುವರಿಸದಂತೆ ಇಲಾಖೆಗೆ ತಿಳಿಸಿದ್ದೇವೆ.

- ಕಿರಿಯ ಇಂಜಿನಿಯರ್, ಬಂಟ್ವಾಳ ಲೋಕೋಪಯೋಗಿ ಇಲಾಖೆ

*******

ಅಮೃತ ಯೋಜನೆಯಡಿಯಲ್ಲಿ ಮೊಡಂಕಾಪು ಪರಿಸರದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆಯಿತ್ತಿದೆ. ಈ ರಸ್ತೆಯಲ್ಲಿ ರಸ್ತೆಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸಂಪೂರ್ಣ ಡಾಮರೀಕರಣ ಮಾಡಲಾಗಿದೆ. ಪೈಪ್‌ಲೈನ್ ಅಳವಡಿಸಲು ಯಾವುದೇ ಸ್ಥಳಾವಕಾಶ ಇಲ್ಲ. ಇದರಿಂದಾಗಿ ರಸ್ತೆಗೆ ಹಾನಿ ಮಾಡಬೇಕಾಗಿದೆ.

- ಶೋಭಾಲಕ್ಷ್ಮೀ, ಇಂಜಿನಿಯರ್, ಕರ್ನಾಟಕ ಹರ್ಬನ್ ವಾಟರ್ ಸಪ್ಲೈ ಹಾಗೂ ಒಳಚರಂಡಿ ಇಲಾಖೆ

*********

ಈಗ ಮೊಡಂಕಾಪು ವಲಯ ಸಂಪೂರ್ಣ ಡೇಂಜರ್ ವಲಯವಾಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಿಂದ ರಸ್ತೆ ಬದಿಯಲ್ಲಿ ಹೊಂಡ ಮಾಡಿ ಪೈಪ್‌ಲೈನ್ ಅಳವಡಿಸಿದ್ದಾರೆ. ಆದರೆ ರಸ್ತೆ ಬದಿಯಲ್ಲಿರುವ ಕಲ್ಲುಗಳ ರಾಶಿಯನ್ನು ಸಮತಟ್ಟು ಮಾಡದೇ ಹಾಗೇ ಬಿಟ್ಟಿದ್ದಾರೆ. ಇದರಿಂದ ಈ ಭಾಗದಲ್ಲಿ ನಡೆದುಕೊಂಡು ಹೋಗುವವರಿಗೆ ತುಂಬಾ ತೊಂದರೆಯಾಗಿದೆ. ಈ ಪ್ರದೇಶದಲ್ಲಿ ಹಲವಾರು ಶಿಕ್ಷಣ ಕೇಂದ್ರಗಳು ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಆದಷ್ಟು ಬೇಗ ರಸ್ತೆಯ ಬದಿಯನ್ನು ಸುವ್ಯವಸ್ಥೆಗೆ ತರಬೇಕಾಗಿ ವಿನಂತಿ.

- ಸದಾನಂದ ಬಂಗೇರ, ಸ್ಥಳೀಯರು

*******

Leave a Comment