ಬಂಟ್ವಾಳ :ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲಾ ಸಂಘ ಚಾಲಕ, ಸಾಮಾಜಿಕ ನೇತಾರ, ಧಾರ್ಮಿಕ ಚಿಂತಕ, ಶಿಕ್ಷಣ ಪ್ರೇಮಿ, ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸರ್ವಮಂಗಳ ಸಭಾಂಗಣದಲ್ಲಿ ಜೂನ್ 3ರಂದು ಶನಿವಾರ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ನುಡಿ ನಮನ ಸಲ್ಲಿಸಿ ಮಾತನಾಡಿ, ಸಮಾಜ ಸೇವೆಗಾಗಿಯೇ ಬದುಕಿದ ಕಾಂತಪ್ಪ ಶೆಟ್ಟಿ ಅವರು ನೇರ ನಡೆ-ನುಡಿಯ ಚಿಂತನೆಯ ವ್ಯಕ್ತಿತ್ವದಿಂದ, ನಿತ್ಯ ನಿರಂತರ ಹೋರಾಟದಿಂದ, ಸಮಾಜಮುಖಿ ಸೇವೆಗಾಗಿ ತನ್ನ ಇಡೀ ಬದುಕನ್ನೇ ಸವೆಸಿ,ಹಿಂದುತ್ವಕ್ಕಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದರು, ಅವರ ಅರ್ಪಣಾ ಮನೋಭಾವದ ಸೇವೆ ಎಲ್ಲರಿಗೂ ಅನುಕರಣಿಯ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಸಂಘ ಚಾಲಕ ಡಾ.ವಾಮನ್ ಶೆನೈ ಮಾತನಾಡಿ, ಸಮಾಜಕ್ಕೆ ತನ್ನನ್ನು
ತಾನು ಪೂರ್ಣ ಪ್ರಮಾಣದಲ್ಲಿ ಅರ್ಪಿಸಿಕೊಂಡಾಗ ಬದಲಾವಣೆ ಸಾಧ್ಯವಾಗುತ್ತದೆ, ಎಂಬುದನ್ನು ಕಾಂತಪ್ಪ ಶೆಟ್ಟಿ ತೋರಿಸಿಕೊಟ್ಟಿದ್ದಾರೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ನಿಷ್ಠೆ ಪ್ರಾಮಾಣಿಕ ತನದಿಂದ ಸೇವೆಗೈದು ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರು.
ಆರ್ ಎಸ್ ಎಸ್ ಪ್ರಮುಖರಾದ ಗೋಪಾಲ್ ಚೆಟ್ಟಿಯಾರ್, ದಾ.ಮಾ ರವೀಂದ್ರ, ಟಿ.ವಿವೇಕ್ ಆಳ್ವ,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಕೆ ಆರ್ ದೇವದಾಸ್ ಸ್ವಾಗತಸಿ, ವಿ ಹೆಚ್ ಪಿ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ದಿ. ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು















