Coastal Bulletin

ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 18 ವರ್ಷಗಳ ಬಳಿಕ ರೂ 1.50 ಕೋಟಿ ವೆಚ್ಛದಲ್ಲಿ ಜೀರ್ಣೋದ್ದಾರಗೊಂಡು ಏ.10ರಂದು ಸಂಭ್ರಮ ಸಡಗರದಿಂದ ದೇವರಿಗೆ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ.

ಬದನಡಿ ಕ್ಷೇತ್ರದಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಏ.5ರಂದು ಮಧ್ಯಾಹ್ನ 3.30 ಗಂಟೆಗೆ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಸಿದ್ಧಕಟ್ಟೆಯಿಂದ ಹೊರಡುವ ಆಕರ್ಷಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಕಟೀಲು ಕ್ಷೇತ್ರದ ಕಮಲಪ್ರಸಾದ ಅಸ್ರಣ್ಣ ಮತ್ತು ಪೂಂಜ ಕ್ಷೇತ್ರದ ಕೃಷ್ಣಪ್ರಸಾದ ಅಸ್ರಣ್ಣ ಚಾಲನೆ ನೀಡುವರು. ಇದೇ ವೇಳೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಇವರು ಉಗ್ರಾಣ,ಕರ್ನಾಟಕ ಬ್ಯಾಂಕಿನ ಮಾಜಿ ಸಿಇಒ ಪಿ.ಜಯರಾಮ್ ಭಟ್ ಇವರು ಪಾಕಶಾಲೆ, ಹೋಟೆಲ್ ಉದ್ಯಮಿ ಪತ್ತುಮುಡಿ ಸೂರ್ಯನಾರಾಯಣ ರಾವ್ ಅನ್ನಛತ್ರ ಉದ್ಘಾಟಿಸುವರು.ರಾತ್ರಿ 11 ಗಂಟೆಗೆ 'ಶಿವದೂತೆ ಗುಳಿಗೆ' ತುಳು ನಾಟಕ ಪ್ರದರ್ಶನ ಗೊಳ್ಳಲಿದೆ ಎಂದರು.

ಏ.6ರಿಂದ ಪ್ರತಿದಿನ ಭಜನೆ, ಹರಿಕಥೆ, ಭರತನಾಟ್ಯ, ಭಕ್ತಿಗಾನ ವೈಭವ, ಯಕ್ಷಗಾನ ಮತ್ತಿತರ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಏ.9 ಮತ್ತು 10ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕರಿಂಜೆ ಮುಕ್ತಾನಂದ ಸ್ವಾಮೀಜಿ, ಹಾಸನ ಅರೆಮಾದನಹಳ್ಳಿ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಕಟೀಲು ಕ್ಷೇತ್ರದ ಹರಿನಾರಾಯಣ ಅಸ್ರಣ್ಣ, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಸಂಸದ ನಳಿನ್ ಕುಮಾರ್ ಕಟೀಲು, ಹರೀಶ ಪೂಂಜ, ಉಮಾನಾಥ ಕೋಟ್ಯಾನ್, ಕೆ.ಪ್ರತಾಪಸಿಂಹ ನಾಯಕ್, ಮಾಜಿ ಸಚಿವ ಬಿ.ರಮಾನಾಥ ರೈ, ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ಕಳೆದ 18 ವರ್ಷಗಳ ಹಿಂದೆ ಕುಸಿದು ಬೀಳುವಂತಿದ್ದ ಮಣ್ಣಿನ ಗೋಡೆಯ ಗರ್ಭಗುಡಿ ಮತ್ತು ಸುತ್ತುಗೋಪುರ ತೆರವುಗೊಳಿಸಿ ದೇವಸ್ಥಾನ ಪುನರ್ ನಿರ್ಮಾಣಗೊಂಡು ದೇವರ ಪುನರ್ ಪ್ರತಿಷ್ಠೆ ಸಹಿತ ಅಷ್ಟಬಂಧ ಬ್ರಹ್ಮಕಲಶ ನಡೆದಿದ್ದು, ಇದೀಗ ಮತ್ತೆ ರೂ 1.50 ಕೋಟಿ ವೆಚ್ಛದಲ್ಲಿ ಜೀರ್ಣೋದ್ದಾರಗೊಂಡಿದೆ. ನೂತನ ಬಾವಿ ರಚನೆ, ನಾಗನಕಟ್ಟೆ, ಅಶ್ವತ್ಥಕಟ್ಟೆ, ವಸಂತ ಮಂಟಪ ನಿರ್ಮಾಣ, ಒಳಾಂಗಣದಲ್ಲಿ ಹಾಸುಗಲ್ಲು ಮತ್ತು ಗ್ರಾನೈಟ್

ಅಳವಡಿಕೆ, ಮೇಲ್ಛಾವಣಿಗೆ ಶೀಟು ಅಳವಡಿಕೆ, ಹೊರಾಂಗಣ ಮಾಡು ನಿರ್ಮಾಣ, ಇಂಟರ್ ಲಾಕ್ ಅಳವಡಿಕೆ, ಸಭಾಂಗಣ ವಿಸ್ತರಣೆ, ಅನ್ನಛತ್ರ ನಿಮರ್ಾಣಗೊಂಡಿದೆ ಎಂದರು.

ದೇವಸ್ಥಾನ ಮತ್ತು ಸ್ಥಳೀಯ ಕೃಷಿಕರಿಗೆ ಅನುಕೂಲವಾಗುವಂತೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರು ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರುಗೊಳಿಸಿದ ರೂ 50ಲಕ್ಷ ವೆಚ್ಛದ ತಡೆಗೋಡೆ ಕಾಮಗಾರಿಯಿಂದ ಬೃಹತ್ ಗಾತ್ರದ ತೀರ್ಥಕೆರೆ ನಿಮರ್ಾಣಗೊಂಡಿದೆ. ರೂ 50ಲಕ್ಷ ವೆಚ್ಛದಲ್ಲಿ ರಾಯಿ-ಬದನಡಿ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.

ವಿಶೇಷತೆ: 

ಸುಮಾರು 500 ವರ್ಷಗಳ ಹಿನ್ನೆಲೆ ಹೊಂದಿರುವ ಈ ದೇವಳದ ಗರ್ಭಗುಡಿಗೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಬಾಗಿಲು ಇದೆ. ಏಕಶಿಲಾ ವಿಗ್ರಹದಲ್ಲಿ ಎರಡು ಬದಿ ನಾಗಬ್ರಹ್ಮ ಮತ್ತು ಸುಬ್ರಹ್ಮಣ್ಯೇಶ್ವರ ದೇವರ ಆರಾಧನೆಯು ನೈವೇದ್ಯ ಸಮರ್ಪಣೆ ಸಹಿತ ಪೂಜೆ ಸಲ್ಲಿಕೆ ಇಲ್ಲಿನ ವಿಶೇಷತೆ. ಚರ್ಮವ್ಯಾಧಿ, ವೈವಾಹಿಕ ಮತ್ತು ಸಂತಾನಪ್ರಾಪ್ತಿ, ಜಾನುವಾರು, ಕೃಷಿ ಸಮೃದ್ಧಿಗೆ ಭಕ್ತರು ಬೆಳ್ಳಿ ಹರಕೆ ನೀಡುತ್ತಿದ್ದು, ಎಡೆಸ್ನಾನ ಪದ್ಧತಿಯೂ ಇದೆ. ವಾರ್ಷಿಕ ನಾಗರಪಂಚಮಿ ಮತ್ತು ಷಷ್ಠಿ ಮಹೋತ್ಸವ, ಪರಿವಾರ ದೈವಗಳಿಗೆ ನೇಮೋತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ , ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಚೌಟ, ಅನುವಂಶಿಕ ಪ್ರಧಾನ ಅರ್ಚಕ ಕೆ.ಸುಂದರ ಹೊಳ್ಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ ಗೋವಿಂದ ಬೆಟ್ಟು, ಹೊರೆಕಾಣಿಕೆ ಸಮಿತಿ ಸಂಚಾಲಕ ರಶ್ಮಿತ್ ಶೆಟ್ಟಿ ಕೈತ್ರೋಡಿ, ಆರ್ಥಿಕ ಸಮಿತಿ ಸಂಚಾಲಕ ಶರತ್ ಕುಮಾರ್ ಕೊಯಿಲ, ಕೋಶಾಧಿಕಾರಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಅರಳ ಕ್ಷೇತ್ರದ ಅರ್ಚಕ ಹರೀಶ ಭಟ್, ಭಜನಾ ಮಂಡಳಿ ಗೌರವಾಧ್ಯಕ್ಷ ದಿನೇಶ ಸುವರ್ಣ ರಾಯಿ, ಪ್ರಮುಖರಾದ ಚಂದ್ರಶೇಖರ ಗೌಡ ಕಾರಂಬಡೆ, ಸಚ್ಚಿದಾನಂದ ಭಟ್ ಸಿದ್ಧಕಟ್ಟೆ ಮತ್ತಿತರರು ಇದ್ದರು. ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ವಂದಿಸಿದರು.


Leave a Comment