ಮೂಡುಬಿದಿರೆ: ಕನ್ನಡ ನಾಡು ನುಡಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಅಪರೂಪದ ಸಾಧಕರು ಅನೇಕರಿದ್ದಾರೆ. ಶಾಸನಗಳಲ್ಲಿಯೂ ಕಾಣದ, ಕನ್ನಡದ ಇತಿಹಾಸ, ಭವವಿಷ್ಯಗಳಲ್ಲಿ ಕಾಣಸಿಗದ ಮಹತ್ವದ ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ರೇಷ್ಠ ಸಾಧನೆ. ಅಂತಹ ಕೆಲಸವನ್ನು ಕಾಂತಾವರದ ನೆಲದಲ್ಲಿ ಕನ್ನಡ ಸಂಘ ಸಾಧಿಸಿದೆ. ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಮೂಲಕ ಈವರೆಗೆ ಕರಾವಳಿ ಜಿಲ್ಲೆಯ 340 ಸಾಧಕರನ್ನು ಕೃತಿ ರೂಪದಲ್ಲಿ ಲೋಕಾರ್ಪಣೆಗೊಳಿಸುವ ಸಾಹಸ ವಿವಿ ಮಟ್ಟದಲ್ಲಿಯೂ ಆಗಿಲ್ಲ. ಹಾಗಾಗಿ ನಾಡಿಗೆ ನಮಸ್ಕಾರ ಮಾಲಿಕೆ ನಾಡೇ ನಮಸ್ಕರಿಸಬೇಕಾದ ಮಾಲಿಕೆ ಎಂದು ಹಿರಿಯ ವಿಮರ್ಶಕ, ಕತೆಗಾರ ಬೆಳಗೋಡು ರಮೇಶ ಭಟ್ ಹೇಳಿದರು. ಅವರು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘದ ವತಿಯಿಂದ ಕಾಂತಾವರದ ಕನ್ನಡ ಭವನದ ವಚನ ವೇದಿಕೆಯಲ್ಲಿ ಬುಧವಾರ ನಡೆದ ಕಾಂತಾವರ ಉತ್ಸವ 2023 ಸಮಾರಂಭದಲ್ಲಿ ಸಂಘದ ದತ್ತಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು.
ಕನ್ನಡ ಕಾವ್ಯಗಳ ಶ್ರೇಷ್ಠತೆಗೆ ಉದಾಹರಣೆಯೆಂಬತೆ ಹರಿಶ್ಚಂದ್ರ ಕಾವ್ಯದ ಆಯ್ದ ಭಾಗಗಳ ವಾಚನ ಉಗ್ಗು ಸಮಸ್ಯೆಯ ನಿವಾರಣೆಗೂ ಸುಲಭದ ದಾರಿಯಾದ ನಿದರ್ಶನವನ್ನು ಅವರು ವಿವರಿಸಿದರು.
ಸುಮನಸ್ಸಿಗಾಗಿ ಸಾಹಿತ್ಯ:
ಸಾಹಿತ್ಯದಿಂದ ಮನಸ್ಸು ಹಸನಾಗಬೇಕು. ಇಂದು ಕನ್ನಡ ಶಾಲೆಗಳು ವರ್ಷದಿಂದ ವರ್ಷಕ್ಕೆ ಮುಚ್ಚಿಕೊಳ್ಳುವ ಸ್ಥಿತಿಯಲ್ಲೂ ಸರಕಾರ ಮೌನವಾಗಿದೆ. ಕನ್ನಡ ಪುಸ್ತಕಗಳನ್ನು ಕೊಳ್ಳುವವರಿದ್ದಾರೆ. ಆದರೆ ಓದುವುದಿಲ್ಲ ಎಂದು ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಿಷಾದಿಸಿದರು. ಸಮಾರಂಭದ ಅಧ್ಯಕ್ಷತೆವಹಿಸಿ ಕಾಂತಾವರ ಕನ್ನಡ ಸಂಘದ ಏಳು ದತ್ತಿನಿಧಿ ಪ್ರಶಸ್ತಿಗಳ ಪ್ರದಾನ ಮಾಡಿ ಮಾತನಾಡಿದ ಅವರು ನಾಡಿಗೇ ಮಾದರಿಯಾದ ಕಾಂತಾವರ ಕನ್ನಡ ಸಂಘದ ಮಾದರಿ ಸೇವೆ ಸಾಧನೆಗಳೂ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗುವುದಿಲ್ಲ ಎನ್ನುವುದೇ ನಿರಾಶೆಯ ಸಂಗತಿ ಎಂದರು.
ನಾಡಿಗೆ ನಮಸ್ಕಾರ ಗ್ರಂಥ ಮಾಲೆ, ಇತರೆ ಕೃತಿಗಳನ್ನು ಲೋಕಾರ್ಪಣೆ ಮಾಡಿದ ವಿಶ್ರಾಂತ ಭಾಷಾ ಪ್ರಾಧ್ಯಾಪಕ ಪ್ರೊ. ಎನ್. ತಿರುಮಲೇಶ್ವರ ಭಟ್ ನಾಡಿಗೆ, ದೇಶಕ್ಕೆ, ನಮ್ಮೆಲ್ಲರಿಗೂ ಶುಭವಾಗಲಿ ಎಂದರು. ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಕೃತಿಗಳ ಸಂಪಾದಕ ಡಾ. ಬಿ.ಜನಾರ್ಧನ ಭಟ್ ವಿವರಿಸಿದರು.
ಸಂಘದ ಸಂಚಾಲಕ ವಿಠಲ ಬೇಲಾಡಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಸಮ್ಮಾನ ಪತ್ರ ವಾಚಿಸಿದರು. ಸಾಧಕರು, ಕೃತಿಕಾರರು ಮತ್ತು ಪ್ರಾಯೋಜಕರನ್ನು ಗೌರವಿಸಲಾಯಿತು.
ದತ್ತಿ ನಿಧಿ ಪ್ರಶಸ್ತಿ ಪ್ರದಾನ:
ಮೈತ್ರೇಯಿ ಗುರುಕುಲ ( ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ) ಡಾ.ಎಸ್.ಡಿ.ಶೆಟ್ಟಿ ( ಮಹೋಪಧ್ಯಾಯ ಪ್ರಶಸ್ತಿ) ಡಾ. ಶ್ರೀಕೃಷ್ಣ ಭಟ್ ಅತರ್ಿಕಜೆ ( ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ), ವೈ.ವಿ.ಗುಂಡೂರಾವ್ ( ಮಂಜನ ಬೈಲ್ ರಂಗ ಸಮ್ಮಾನ್), ಪ್ರೊ. ಎ.ಕೃಷ್ಣಪ್ಪ ಪೂಜಾರಿ ( ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ), ಡಾ.ಬಿ. ಭಾಸ್ಕರ ರಾವ್ ( ಕಾಂತಾವರ ಅಂಕಣ ಸಾಹಿತ್ಯ ಪ್ರಶಸ್ತಿ), ವಿವೇಕಾನಂದ ಕಾಮತ್ (ಕಾಂತಾವರ ಕಾದಂಬರಿ ಸಾಹಿತ್ಯ ಪ್ರಶಸ್ತಿ) ಪುರಸ್ಕೃತರಿಗೆ ತಲಾ ರೂ 10 ಸಾವಿರ ನಗದು ಸಹಿತ ತಾಮ್ರಫಲಕ, ಗೌರವ ಪ್ರದಾನ ಮಾಡಲಾಯಿತು.
ನಾಡಿಗೆ ಕೃತಿ ನಮಸ್ಕಾರ:
ಸಂಘವು ಪ್ರಕಟಿಸುತ್ತಿರುವ ನಾಡಿಗೆ
ನಮಸ್ಕಾರ ಗ್ರಂಥ ಮಾಲೆಯಲ್ಲಿ ನಾಡು ನುಡಿ ಸಾಧಕರ ಕುರಿತಾದ 9 ಹೊಸ ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ಇದರೊಂದಿಗೆ ಗ್ರಂಥಮಾಲೆಯಲ್ಲಿ ಪ್ರಕಟಿತ ಕೃತಿಗಳ ಸಂಖ್ಯೆ 340ಕ್ಕೇರಿದೆ. ಸಂಸ್ಕೃತಿ ಸಂವರ್ಧನ ಗ್ರಂಥ ಮಾಲೆಯ ಮಟ್ಟಿ ರಾಧಾಕೃಷ್ಣ ರಾವ್ ಕುರಿತ ಕೃತಿ, ಉಡುಪಿಯ ಪ್ರೊ.ಎನ್.ತಿರುಮಲೇಶ್ವರ ಭಟ್ಟರ 'ಅನ್ಯ ಭಾಷಿಕರಿಗೆ ಕನ್ನಡ ಪಠ್ಯ' ಕೃತಿ ಅನಾವರಣಗೊಳಿಸಲಾಯಿತು.
ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು.
ಅಪರಾಹ್ನ ಗಮಕಿ ವಿದ್ವಾನ್ ಸುರೇಶ್ ರಾವ್ ಅತ್ತೂರು, ವಾಗ್ಮಿ ಮುನಿರಾಜ ರೆಂಜಾಳ ಅವರಿಂದ ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯದ ವಚನ ವ್ಯಾಖ್ಯಾನ ಕಾರ್ಯಕ್ರಮ ಜರಗಿತು.
ರಶೀದಿಯಲ್ಲ ಅಡ್ವಾನ್ಸ್ !
ಸನ್ಮಾನವೆಂಬುದು ನಾವು ಮಾಡಿದ ಸಾಧನೆಯ ಕೆಲಸಗಳಿಗಾಗಿ ಕೊಡುವ ರಶೀದಿ ಎಂದು ಭಾವಿಸಬಹುದು. ಆದರೆ ಸಮ್ಮಾನಗಳಿಂದ ಸ್ಫೂತರ್ಿ ಪಡೆದು ಜವಾಬ್ದಾರಿ ಹೆಚ್ಚಿಸಿಕೊಳ್ಳುವುದರಿಂದ ಇನ್ನಷ್ಟು ಕೆಲಸ ಮಾಡಲು ಸನ್ಮಾನ ನಮಗೆ ಎಡ್ವಾನ್ಸ್ ಕೊಟ್ಟದ್ದೆಂದು ತಿಳಿದುಕೊಳ್ಳಬೇಕು ಎಂದು ಪ್ರಶಸ್ತಿ ಪುರಸ್ಕೃತ ವೈ.ವಿ ಗುಂಡೂರಾವ್ ಹಾಸ್ಯಭರಿತ ಪ್ರತಿಕ್ರಿಯೆ ನೀಡಿದರು. ಕೆಲವೊಂದು ಕನ್ನಡ ಶಬ್ದಗಳನ್ನು ನಾವೇ ಸೃಸ್ಟಿಸಿಕೊಳ್ಳಬೇಕು ಎಂದ ಅವರು ಹಾಡರ್್ವೇರ್ ಯಂತ್ರವಾದಿಯಾದರೆ ಸಾಫ್ಟ್ ವೇರ್ ತಂತ್ರವಾದಿ, ವೈರಸ್ ಕುತಂತ್ರವಾದಿ ಹ್ಯಾಂಗ್ ಆಗುವುದು ಅತಂತ್ರ ಎಂದು ಸಭೆಯಲ್ಲಿ ನಗೆ ಅಲೆ ಎಬ್ಬಿಸಿದರು.
ನನ್ನನ್ನು ಶಾಲೆಗೆ ಸೇರಿಸುವುದಕ್ಕಾಗಿ ಅಡುಗೆ ಮನೆಯ ಪಾತ್ರೆ ಮಾರಿ ಅಂದಿನ ಶಾಲಾ ಶುಲ್ಕ 10 ಆಣೆ ಕಟ್ಟುವ ಬದ್ಧತೆ ತೋರಿದ ಅಮ್ಮನ ದೂರದಶರ್ಿತ್ವದ ಫಲವಾಗಿ ಇಂದು 25 ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ನೀಡಿದ ಮ್ಯಾಂಜೆಸ್ಟರ್ ವಿವಿಯಲ್ಲಿ ಶಿಕ್ಷಣ, ಅಧ್ಯಾಪನ ನಡೆಸುವಂತಾಗಿದೆ. ಹಾಗಾಗಿ ಇಂದು ಪ್ರಶಸ್ತಿಯ ಜತೆಗಿನ ಹತ್ತು ಸಾವಿರ ನಗದು ಆ ಹತ್ತು ಆಣೆಯನ್ನು ನೆನಪಿಸಿದೆ. ಹಾಗಾಗಿ ಈ ಗೌರವ ನನಗೆ ರಾಷ್ಟ್ರಪ್ರಶಸ್ತಿಗಿಂತಲೂ ಮಿಗಿಲು ಎಂದು ಅಂಕಣಕಾರ, ಡಾ.ಬಿ.ಭಾಸ್ಕರ ರಾವ್ ಭಾವುಕರಾದರು.
.














